'ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ'
ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ವಿಭಜನೆ| ಈ ಸಂಬಂಧ ಶಾಸಕ ಸೋಮಶೇಖರ್ ರೆಡ್ಡಿ ಮನವೊಲಿಸಿದ ಸಿಎಂ ಬಿಎಸ್‌ವೈ| ರಾಜಕೀಯ ದೃಷ್ಟಿಯಿಂದಲ್ಲ ಎಂದು ನಾವು ಕೂಡ ಮನವೊಲಿಸಿದ್ದೇವೆ ಎಂದ ರಾಮುಲು|
ಚಿತ್ರದುರ್ಗ(ನ.28): ಸಚಿವ ಸಂಪುಟ ವಿಸ್ತರಣೆ, ಪುನರ್‌ರಚನೆ ಬಗ್ಗೆ ಸಿಎಂ ಯಡಿಯೂರಪ್ಪ ಇನ್ನೂ ನಿರ್ಧರಿಸಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆದಿದೆ. ದೆಹಲಿಗೆ ಹೋಗಿ ಸಿಎಂ ವಾಪಸ್ ಬಂದಿದ್ದಾರೆ. ಎಲ್ಲರನ್ನೂ ಸಮಾಧಾನ ಪಡಿಸಿಕೊಂಡು ಸಿಎಂ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಯನ್ನ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಶಾಸಕರು ಸಚಿವ ಸ್ಥಾನ ಅಪೇಕ್ಷೆ ಪಡೋದ್ರಲ್ಲಿ ಯಾವುದೇ ತಪ್ಪಿಲ್ಲ: ಕಟೀಲ್
ಕೊರೋನಾ ಸಂದರ್ಭದಲ್ಲೂ ನಮ್ಮ ಸರ್ಕಾರ ಬ್ಯಾಲೆನ್ಸ್ ಮಾಡಿಕೊಂಡು ಸಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ವಿಭಜನೆಯಾಗಿದೆ. ಈ ಸಂಬಂಧ ಸಿಎಂ ಬಿಎಸ್‌ವೈ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನ ಮನವೊಲಿಸಿದ್ದಾರೆ. ರಾಜಕೀಯ ದೃಷ್ಟಿಯಿಂದಲ್ಲ ಎಂದು ನಾವು ಕೂಡ ಮನವೊಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಮೊಳಕಾಲ್ಮೂರು ತಾಲೂಕಿನಲ್ಲಿ ಈ ಬಗ್ಗೆ ಹೋರಾಟ ನಡೆದಿದೆ. ಹಿಂದುಳಿದ ಮೊಳಕಾಲ್ಮೂರಿಗೆ 371 ಜೆ ಸೌಲಭ್ಯ ಅಗತ್ಯವಿದೆ. ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ವಿಚಾರದ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.