ಕರ್ನಾಟಕದಲ್ಲಿ ಮತ್ತೆ ಆಪರೇಷನ್ ಕಮಲ, ಸುಳಿವು ಕೊಟ್ಟ ಸಚಿವ
* ಕರ್ನಾಟಕದಲ್ಲಿ ಮತ್ತೆ ಆಪರೇಷನ್ ಕಮಲ
* ಸುಳಿವು ಕೊಟ್ಟ ಸಚಿವ ಅಶ್ವತ್ಥ್ ನಾರಾಯಣ
* ಮತ್ತಷ್ಟು ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದ ಸಚಿವ
ಹುಬ್ಬಳ್ಳಿ, (ಜೂನ್.11): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಆಗಲೇ ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಿದ್ದಾರೆ. ಇದರ ಮಧ್ಯೆ ಸಚಿವರೊಬ್ಬರು ಆಪರೇಷನ್ ಕಮಲದ ಸುಳಿವು ಕೊಟ್ಟಿದ್ದಾರೆ.
ಹೌದು... ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮತ್ತಷ್ಟು ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮತ್ತೊಂದು ಆಪರೇಷನ್ ಕಮಲದ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಟುಂಬ ಪಕ್ಷಗಳ ನಿಲುವಿನಿಂದ ಬೇಸತ್ತು ಕೆಲವರು ಬಿಜೆಪಿಗೆ ಬರುತ್ತಾರೆ ಕಾದು ನೋಡಿ ಎಂದರು. ಪರಿಸ್ಥಿತಿಗೆ ಅನುಗುಣವಾಗಿ ಯಾರ್ಯಾರು ಬರುತ್ತಾರೆ ಅನ್ನೋದು ಗೊತ್ತಾಗುತ್ತೆ. ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ ಅದೇ ರೀತಿ ಅವಕಾಶಗಳಿವೆ. ಹೀಗಾಗಿ ಇನ್ನೂ ಹಲವು ಜನ ಬಿಜೆಪಿಗೆ ಸೇರಲಿದ್ದಾರೆ ಎಂದರು.
ಯುಪಿ ಹಿಂಸಾಚಾರ ಸರಿಯಲ್ಲ
ಯುಪಿಯಲ್ಲಿ ಹಿಂಸಾಚಾರ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ, ಒಂದು ಹೇಳಿಕೆಯನ್ನಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ, ಇದು ಸರಿಯಲ್ಲ. ದೇಶದ ಐಕ್ಯತೆ ವಿಚಾರದಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಎ ಟೀಮ್ ಬಿ ಟೀಂ ಅಂತ ಅನ್ನೋ ಪ್ರಶ್ನೆಯೇ ಇಲ್ಲ. ನಮ್ಮ ಸಂಖ್ಯಾಬಲ ಜಾಸ್ತಿ ಇತ್ತು ನಾವು ಒಂದಾಗಿ ಕೆಲಸ ಮಾಡಿದೆವು. ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಒಂದಾಗಲಿಲ್ಲ. ಹೀಗಾಗಿ ಸಹಜವಾಗಿ ಗೆಲುವಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಎಲ್ಲ ಗೊಂದಲಗಳು ನಿವಾರಣೆಯಾಗಿದೆ. ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಲು ತೀರ್ಮಾನಿಸಲಾಗಿದೆ. ಪಠ್ಯ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದೆ. ಈ ಬಗ್ಗೆ ಮತ್ತೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.