ಬಿಜೆಪಿಯಲ್ಲಿ ಹಣ ನೀಡುವ, ಪಡೆದುಕೊಳ್ಳುವ ಸಂಸ್ಕೃತಿ ಇಲ್ಲ. ಅದೇನಿದ್ದರೂ ಜೆಡಿಎಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು
ಬೆಂಗಳೂರು (ಸೆ.04): ಬಿಜೆಪಿಯಲ್ಲಿ ಹಣ ನೀಡುವ, ಪಡೆದುಕೊಳ್ಳುವ ಸಂಸ್ಕೃತಿ ಇಲ್ಲ. ಅದೇನಿದ್ದರೂ ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇಲ್ಲ. ಜೆಡಿಎಸ್‌ನಲ್ಲಿ ಆ ಸಂಸ್ಕೃತಿ ಇದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅತ್ಯಂತ ಶಿಸ್ತಿನ, ಪ್ರಾಮಾಣಿಕ ರಾಜಕಾರಣಿ. ಅಂತಹವರ ಬಗ್ಗೆ ಕೀಳುಮಟ್ಟದ ಆಪಾದನೆ ಮಾಡುವುದು ಮಾಜಿ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಕಳೆದ 3-4 ದಶಕಗಳಿಂದ ಅರುಣ್ ಸಿಂಗ್ ರಾಜಕಾರಣ ಮಾಡುತ್ತಿದ್ದಾರೆ. ಅವರು ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದಾರೆ. ಅವರು ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾಡಿದರು.
ಅರುಣ್ ಸಿಂಗ್ ವಿರುದ್ಧ ಎಚ್‌ಡಿಕೆ, ರೇವಣ್ಣ ಕಿಡಿ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಬಗ್ಗೆ ನಮಗೆಲ್ಲ ಅಪಾರ ಗೌರವ ಇದೆ. ಅವರ ಮಗನಾಗಿ ಬೇರೆಯವರಿಗೆ ಗೌರವ ನೀಡುವುದನ್ನು ಕಲಿತುಕೊಳ್ಳಬೇಕು. ಆಧಾರ ಇಲ್ಲದೆ ಸುಮ್ಮನೇ ಮಾತನಾಡುವುದು ಕುಮಾರಸ್ವಾಮಿಗೆ ಅಭ್ಯಾಸವಾಗಿದ್ದು, ಅದಕ್ಕೆ ವಾಚಾಳಿತನ ಎನ್ನುತ್ತಾರೆ. ಇದನ್ನಾದರೂ ಇಂತಹ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಡಬೇಕು. ಅವರ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಿ 70 ಸ್ಥಾನಗಳನ್ನು ಕಾಂಗ್ರೆಸ್ ಪಡೆದಿದೆ. ಮತ್ತೊಮ್ಮೆ ಲಿಂಗಾಯತ ಧರ್ಮ ಹೋರಾಟಕ್ಕೆ ಮುಂದಾದರೆ ಮುಂದಿನ ಚುನಾವಣೆಯಲ್ಲಿ ಮೂಲೆಗುಂಪಾಗಿ 20 ಸ್ಥಾನ ಪಡೆದುಕೊಳ್ಳಲಿದೆ ಎಂದು ಲೇವಡಿ ಮಾಡಿದರು.
