Mekedatu Congress Padayatra: ನಮ್ಮನ್ನು ಜೈಲಿಗೆ ಕಳುಹಿಸಬಹುದು, ಮಾನಸಿಕವಾಗಿ ಸಿದ್ಧರಾಗಿ: ಸಿದ್ದು

*ಕೋವಿಡ್‌ ನೆಪದಲ್ಲಿ ಬಿಜೆಪಿಯಂದ ಪಾದಯಾತ್ರೆ ತಡೆವ ಯತ್ನ
*ಪಾದಯಾತ್ರೆಯಿಂದ ಬಿಜೆಪಿಗೆ- ಜೆಡಿಎಸ್ ನಡುಕ : ಸಿದ್ದು
*25 ಮಂದಿ ಬಿಜೆಪಿ ಸಂಸದರು ಕೇಂದ್ರದ ಮೇಲೆ ಏಕೆ ಒತ್ತಡ ತರಲಿಲ್ಲ
 

Mekedatu Project Karnataka BJP can send us to jail be mentally prepared says Siddaramaiah mnj

ಮೈಸೂರು (ಜ.04): ಮೇಕೆದಾಟು ಯೋಜನೆ (Mekedatu Project) ವಿರುದ್ಧ ರಾಜ್ಯ ಬಿಜೆಪಿ ಸರ್ಕಾರವೇ ತಮಿಳುನಾಡನ್ನು (Tamil Nadu) ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಇದೀಗ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ ಆರಂಭಿಸಲುದ್ದೇಶಿಸಿರುವ ಪಾದಯಾತ್ರೆಯನ್ನೂ (Padayatra) ತಡೆಯಲು ಯತ್ನಿಸುತ್ತಿದ್ದು, ಹೋರಾಟಗಾರರನ್ನು ಜೈಲಿಗೆ ಕಳುಹಿಸುವ ಸಾಧ್ಯತೆಯೂ ಇದೆ. ಅದಕ್ಕೆ ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕೋವಿಡ್‌ ನೆಪ ಹೇಳಿಕೊಂಡು ಮೇಕೆದಾಟು ಪಾದಯಾತ್ರೆ ತಡೆಯಲು ಸರ್ಕಾರ ಪ್ರಯತ್ನಿಸುವ ಸಾಧ್ಯತೆ ಇದೆ. ಆದರೆ, ನಾವು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಪಾದಯಾತ್ರೆ ಮಾಡುತ್ತೇವೆ. ಅವರೇನಾದರೂ ಮಾಡಿಕೊಳ್ಳಲಿ, ನಾವಂತೂ ಪಾದಯಾತ್ರೆ ಮಾಡುತ್ತೇವೆ. ಈ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಿ, ನಾನೂ ಪಾಲ್ಗೊಳ್ಳುತ್ತೇನೆ. ಬಳ್ಳಾರಿ ಪಾದಯಾತ್ರೆಗಿಂತಲೂ ದೊಡ್ಡ ಮಟ್ಟದ ಹೋರಾಟ ಇದಾಗಬೇಕು ಎಂದು ಹೇಳಿದರು.

ಪಾದಯಾತ್ರೆಯಿಂದ ಬಿಜೆಪಿಗೆ ನಡುಕ

ಮೇಕೆದಾಟು ಯೋಜನೆ ಕುರಿತ ಕಾಂಗ್ರೆಸ್‌ನ ಈ ಪಾದಯಾತ್ರೆಯಿಂದ ಬಿಜೆಪಿ (BJP) ಮತ್ತು ಜೆಡಿಎಸ್‌ಗೆ (JDS) ನಡುಕ ಉಂಟಾಗಿದೆ. ಈ ಹೋರಾಟದಿಂದ ಕಾಂಗ್ರೆಸ್‌ಗೆ (Congress) ರಾಜಕೀಯ ಲಾಭವಾಗುತ್ತದೆ ಎಂಬ ಆರೋಪ ಅಲ್ಲಗಳೆಯಲ್ಲ. ಆದರೆ, ನಮ್ಮದೇ ಸರ್ಕಾರ ಈ ಯೋಜನೆಗೆ ಡಿಪಿಆರ್‌ ಸಿದ್ಧಪಡಿಸಿತ್ತು. ಅಲ್ಲದೆ ಹಸಿರು ಪೀಠ, ಸುಪ್ರೀಂ ಕೋರ್ಟ್‌ ಕೂಡ ಒಪ್ಪಿಗೆ ಸೂಚಿಸಿದ್ದರೂ ಬಿಜೆಪಿ ಮಾತ್ರ ರಾಜಕೀಯ ಮಾಡುತ್ತಿದೆ. ಒಂದು ಕಡೆ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಎತ್ತಿಕಟ್ಟಿದರೆ, ಮತ್ತೊಂದೆಡೆ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಕೂಡ ವಿರೋಧಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ. ಆದರೂ ಕೇಂದ್ರದ ಮೇಲೆ ಏಕೆ ಒತ್ತಡ ತರಲಿಲ್ಲ? ಕಾಂಗ್ರೆಸ್‌ಗೆ ಹೋರಾಟದ ಮೂಲಕ ಗಿಮಿಕ್‌ ಮಾಡುವ ಅಗತ್ಯವಿಲ್ಲ. ಕಾಂಗ್ರೆಸ್‌ನ ಈ ಯಾತ್ರೆ ರಾಜ್ಯದ ಹಿತದೃಷ್ಟಿಯಿಂದ ನಡೆಯುತ್ತಿದೆಯೇ ಹೊರತು, ರಾಜಕೀಯ ಲಾಭಕ್ಕಾಗಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಯೋಜನೆ ಅನುಷ್ಠಾನಗೊಂಡರೆ ಮೈಸೂರು, ಚಾಮರಾಜನಗರ, ಬೆಂಗಳೂರು, ತುಮಕೂರಿಗೆ ಕುಡಿಯುವ ನೀರು ಪೂರೈಸಬಹುದು ಎಂದರು. ಮೇಕೆದಾಟು ಯೋಜನೆಯು ನೀರಾವರಿ ಯೋಜನೆಯಲ್ಲ. ಕುಡಿಯುವ ನೀರಿನ ಯೋಜನೆ. ಈ ಯೋಜನೆಗೆ ಹಸಿರು ನ್ಯಾಯಾಧೀಕರಣ, ಸುಪ್ರೀಂ ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ಇಲ್ಲ. ಕೇಂದ್ರ ಪರಿಸರ ಇಲಾಖೆಯು ಎನ್‌ಒಸಿ ನೀಡಬೇಕಿದೆ. ಆದರೆ, ಡಬಲ್‌ ಎಂಜಿನ್‌ ಸರ್ಕಾರವು ಎನ್‌ಒಸಿ ನೀಡಿಲ್ಲ ಎಂದು ಆರೋಪಿಸಿದರು.

ಎಚ್‌ಡಿಕೆಗೆ ಆತಂಕ-ಸಿದ್ದು

ಹಳೇ ಮೈಸೂರು ಭಾಗದಲ್ಲಿ ನಾವೇ ವಾರಸುದಾರರು ಎಂಬ ಮನೋಭಾವವನ್ನು ಜೆಡಿಎಸ್‌ ಹೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಹುಸಿಯಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅದು ಸಾಬೀತಾಗಿದೆ. ನಾನು ಅವರನ್ನು ವಿರೋಧಿಸುತ್ತಿಲ್ಲ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಇದರಿಂದ ಎಚ್‌.ಡಿ. ಕುಮಾರಸ್ವಾಮಿ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ನಮ್ಮ ಕಾರ್ಯಕ್ರಮವನ್ನು ಹೈಜಾಕ್‌ ಮಾಡಿದ್ದಾರೆ ಎಂದು ಅವರು ಆರೋಪಿಸುತ್ತಿದ್ದಾರೆ. ಆದರೆ ಜೆಡಿಎಸ್‌ ಯಾವತ್ತೂ ಮೇಕೆದಾಟು ವಿಷಯದಲ್ಲಿ ಹೋರಾಟ ನಡೆಸುವ ಘೋಷಣೆ ಮಾಡಿಲ್ಲ ಮತ್ತು ಹೋರಾಟವನ್ನು ಆರಂಭಿಸಿರಲಿಲ್ಲ. ಅಂದ ಮೇಲೆ ಹೈಜಾಕ್‌ ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹಲವು ವರ್ಷಗಳ ಕಾಲ ರಾಜಕೀಯ: ಬಿಜೆಪಿಗೆ ಇಚ್ಛಾಶಕ್ತಿ ಇದ್ದರೆ ಈ ಹಿಂದೆ ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಮತ್ತು ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದಾಗಲೇ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಬಹುದಿತ್ತು. ಆದರೆ ಈಗ ಕಾರಜೋಳ ಅವರು ತನ್ನ ಬಳಿ ದಾಖಲೆ ಇದೆ ಬಿಡುಗಡೆಗೊಳಿಸುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ತಮ್ಮ ಬಳಿ ದಾಖಲೆ ಇದ್ದರೆ ನಾಳೆಯೇ ಬಿಡುಗಡೆಗೊಳಿಸಲಿ. ಮೇಕೆದಾಟು ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರ ಕಳೆದ ಎರಡೂವರೆ ವರ್ಷಗಳಿಂದ ನಿದ್ದೆ ಮಾಡುತ್ತಿದೆ. ವಿರೋಧ ಪಕ್ಷವಾಗಿ ನಾವು ಇದನ್ನೆಲ್ಲ ನೋಡಿಕೊಂಡು ಸುಮ್ಮನಿರಬೇಕೇ? ಬಿಜೆಪಿಯವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರಷ್ಟೆಎಂದರು.

Latest Videos
Follow Us:
Download App:
  • android
  • ios