ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ದೇವೇಗೌಡರ ಕುಟುಂಬದಿಂದಲೇ ಆಗಬೇಕು. ಇವರ ಯಾರ ಕೈಯಲ್ಲೂ ಆಗಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಖಡಕ್ಕಾಗಿ ಹೇಳಿದರು.
ಮಂಡ್ಯ (ಜು.05): ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ದೇವೇಗೌಡರ ಕುಟುಂಬದಿಂದಲೇ ಆಗಬೇಕು. ಇವರ ಯಾರ ಕೈಯಲ್ಲೂ ಆಗಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಖಡಕ್ಕಾಗಿ ಹೇಳಿದರು. ನಗರದ ಜಿಪಂನ ಕಾವೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಾನು ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸುವ ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಅದಕ್ಕೂ ಮೊದಲು ಕಾಂಗ್ರೆಸ್‌ನವರು ಮೊದಲು ತಮಿಳುನಾಡಿನವರನ್ನು ಒಪ್ಪಿಸಿಕೊಂಡು ಬರಲಿ.
ಇದು ಸುಲಭದ ಕೆಲಸ. ಏಕೆಂದರೆ, ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್‌ನವರು ಪರಸ್ಪರ ಸ್ನೇಹಿತರು. ಅವರ ಒಪ್ಪಿಗೆ ಪಡೆದುಕೊಂಡು ಬಂದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದರು. ನಿಖಿಲ್ ಪ್ರವಾಸ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ನಿಖಿಲ್ ಓಡಾಡುತ್ತಿದ್ದಾರೆ. ಮೈತ್ರಿಗೂ ಇದಕ್ಕೂ ಸಂಬಂಧ ಇಲ್ಲ. 224 ಸ್ಥಾನಗಳಿಗೆ ಜೆಡಿಎಸ್ ಸ್ಪರ್ಧಿಸಲು ಸಾಧ್ಯವಿಲ್ಲದ ಕಾರಣ ನಮಗೆ ಶಕ್ತಿ ಇರುವ ಕಡೆ ಸಂಘಟನೆ ಮಾಡುತ್ತಿದ್ದೇವೆ. ಚುನಾವಣೆ ಬಂದಾಗ ಕೇಂದ್ರ ನಾಯಕರ ಜೊತೆ ಕ್ಷೇತ್ರಗಳ ಬಗ್ಗೆ ಮಾತಾಡುತ್ತೇವೆ ಎಂದರು.
ಎಚ್‌ಡಿಕೆ ಕಾಲು ಮುಟ್ಟಿ ನಮಸ್ಕರಿಸಿದ ಕೈ ಶಾಸಕ: ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ಕೈಮುಗಿದು ಕಾಲುಮಟ್ಟಿ ನಮಸ್ಕರಿಸಿದರು. ಕುಮಾರಸ್ವಾಮಿ ಅವರು ಸಭೆಗೆ ಆಗಮಿಸುತ್ತಿದ್ದಂತೆ ಗೌರವದಿಂದ ಕೈಮುಗಿದರಲ್ಲದೆ, ಕಾಲು ಮುಟ್ಟಿ ನಮಸ್ಕರಿಸಿದರು. ಇದಕ್ಕೆ ಕುಮಾರಸ್ವಾಮಿ ಅವರೂ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರು. ಸಭೆಯ ನಡುವೆಯೂ ಒಬ್ಬರಿಗೊಬ್ಬರು ಮಾತನಾಡುತ್ತಿದ್ದ ದೃಶ್ಯ ಕಂಡು ಬಂತು.
ರಾಜ್ಯದಲ್ಲಿ ಜೆಡಿಎಸ್ ಬಲ ಕುಂದಿಲ್ಲ: ಯಾರೋ ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಲಾಟರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಜನರೊಂದಿಗೆ ಜನತಾದಳ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ ತಾಲೂಕು ಜೆಡಿಎಸ್‌ನಿಂದ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸಿದ್ದರಾಮಯ್ಯರನ್ನು ನಂಬಿ ಹೋದ ಹಿರಿಯ ಶಾಸಕ ಬಿ.ಆರ್ ಪಾಟೀಲ್ ಅವರ ಗತಿ ಏನಾಗಿದೆ. ಬೀದಿಯಲ್ಲಿ ಬಂದು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಲಾಟರಿ ಸಿಎಂ ಅಂತ ಅವರ ಪಕ್ಷದಲ್ಲೇ ಮಾತಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿ ಎಂದು ಪ್ರಶ್ನಿಸಿದರು. ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ, ಅನುದಾನ ಸಿಗುತ್ತಿಲ್ಲ ಎಂದು ಇಲ್ಲಿನ ಶಾಸಕ ಎಚ್.ಟಿ.ಮಂಜು ಹೇಳುತ್ತಿದ್ದಾರೆ. ಇದು ಕೇವಲ ವಿಪಕ್ಷದ ಶಾಸಕರು ಮಾತ್ರ ಹೇಳುತ್ತಿಲ್ಲ. ಬದಲಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
