Asianet Suvarna News Asianet Suvarna News

ನಿಗಮ-ಮಂಡಳಿ ಹುದ್ದೆ, ನ.28ಕ್ಕೆ ಸುರ್ಜೇವಾಲ ಜತೆ ಸಭೆ: ಡಿಕೆಶಿ

ನ.28 ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ಸಭೆ ಬಳಿಕ ನಮ್ಮ ನಿಗಮ-ಮಂಡಳಿ ಪಟ್ಟಿಯನ್ನು ಹೈಕಮಾಂಡ್‌ ನಾಯಕರಿಗೆ ಕಳುಹಿಸುತ್ತೇವೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

Meeting with Randeep Surjewala For Corporation Board Posts Says DCM DK Shivakumar grg
Author
First Published Nov 23, 2023, 9:50 AM IST

ಬೆಂಗಳೂರು(ನ.23):  ನಿಗಮ-ಮಂಡಳಿಗಳ ನೇಮಕದ ಕುರಿತ ಮೊದಲ ಹಂತದ ಪಟ್ಟಿ ಬಹುತೇಕ ಅಖೈರುಗೊಂಡಿದ್ದು, ಪಟ್ಟಿಯಲ್ಲಿರುವ ಶಾಸಕರು ಹಾಗೂ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ನ.28ಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ನೇಮಕಾತಿ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆಯಿದೆ.

ಈಗಾಗಲೇ ಪಟ್ಟಿ ಸಿದ್ಧವಾಗಿದೆ. ಆದರೆ ಈ ಪೈಕಿ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಗಮ-ಮಂಡಳಿ ನೇಮಕವನ್ನು ಒಪ್ಪದೆ ಇರಬಹುದು. ಪಟ್ಟಿ ಬಿಡುಗಡೆ ಬಳಿಕ ಆಕ್ಷೇಪ ವ್ಯಕ್ತಪಡಿಸಿದರೆ ಅಥವಾ ನೇಮಕವನ್ನು ಅಲ್ಲಗಳೆದರೆ ಪಕ್ಷಕ್ಕೆ ಮುಜುಗರವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಎಲ್ಲರೊಂದಿಗೂ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬಳಿಕ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ ಒಪ್ಪಿಗೆಗೆ ಕಳುಹಿಸಲಿದ್ದಾರೆ ನಂತರವಷ್ಟೇ ನೇಮಕಾತಿ ಆದೇಶ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ನಾನೊಬ್ಬ ರೈತನ ಮಗ ಕೃಷಿಯ ಮಹತ್ವ ಗೊತ್ತಿದೆ: ಡಿಸಿಎಂ

ನ.28ಕ್ಕೆ ಸುರ್ಜೇವಾಲ ಜತೆ ಸಭೆ: ಡಿಕೆಶಿ

ಈ ಬಗ್ಗೆ ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನ.28 ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ಸಭೆ ಬಳಿಕ ನಮ್ಮ ನಿಗಮ-ಮಂಡಳಿ ಪಟ್ಟಿಯನ್ನು ಹೈಕಮಾಂಡ್‌ ನಾಯಕರಿಗೆ ಕಳುಹಿಸುತ್ತೇವೆ ಎಂದು ಹೇಳಿದರು.

ನಿಗಮ ಮಂಡಳಿ ನೇಮಕ ವಿಚಾರವಾಗಿ ಈಗಾಗಲೇ ಚರ್ಚೆ ಮಾಡುತ್ತಿದ್ದೇವೆ. ಹಿರಿಯ ನಾಯಕರು, ಶಾಸಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾನು ಹಾಗೂ ಮುಖ್ಯಮಂತ್ರಿಗಳು ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಿದೆ. ಹೀಗಾಗಿ ನ.28 ರಂದು ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು ಎಂದರು.

ಗೃಹಸಚಿವರು ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಅಸಮಾಧಾನ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ, ‘ಗೃಹಮಂತ್ರಿಗಳು ಮೂರು ದಿನಗಳ ಕಾಲ ಪ್ರವಾಸದಲ್ಲಿದ್ದರು, ಅವರಿಗೆ ಅವರದೇ ಆದ ಕೆಲಸಗಳಿರುತ್ತವೆ. ಸುಮ್ಮನೆ ಯಾರೋ ಹೇಳಿದ್ದನ್ನು ನೀವು (ಮಾಧ್ಯಮಗಳು) ದೊಡ್ಡದಾಗಿ ಬಿಂಬಿಸುತ್ತೀರಿ. ಈ ರೀತಿ ಅಸಮಾಧಾನ ಸೃಷ್ಟಿಸಿ ನಿಮ್ಮ ಘನತೆ ಯಾಕೆ ಹಾಳುಮಾಡಿಕೊಳ್ಳುತ್ತೀರಿ’ ಎಂದು ಬೇಸರ ವ್ಯಕ್ತಪಡಿಸಿದರು.

ಗೃಹಲಕ್ಷ್ಮೀ ಯೋಜನೆ: ನಾಡದೇವತೆ ಚಾಮುಂಡೇಶ್ವರಿಗೂ ಪ್ರತಿತಿಂಗಳ ₹2000 ನೀಡಲು ಸರ್ಕಾರ ಅಸ್ತು

ಹಿರಿಯ ಶಾಸಕರಿಗೆ ಸ್ಥಾನ: ಡಿಕೆಶಿ

ಪರಮೇಶ್ವರ್‌ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನ ದೊರೆತಿಲ್ಲ ಎಂದು ಬೇಸರವಾಗಿದೆಯಂತಲ್ಲಾ? ಎಂದಾಗ, ‘ಇಲ್ಲಿ ಅವರ ಬೆಂಬಲಿಗರು, ನನ್ನ ಬೆಂಬಲಿಗರು ಎಂಬುದಿಲ್ಲ. ಎಲ್ಲ ಒಟ್ಟಾಗಿ ಕಾಂಗ್ರೆಸ್ ಬೆಂಬಲಿಗರು. ಮಂತ್ರಿಗಿರಿ ಸಿಗದ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ನಿಗಮ ಮಂಡಳಿ ನೇಮಕ ವಿಳಂಬ ಮಾಡುತ್ತಿರುವುದು ಕಲೆಕ್ಷನ್ ಗಾಗಿ ಎಂಬ ಬಿಜೆಪಿ ಟೀಕೆಗೆ, ನಾವು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಿಗಮ ಮಂಡಳಿ ನೇಮಕ ಮಾಡುತ್ತಿದ್ದೇವೆ. ಅವರು ಅಧಿಕಾರಕ್ಕೆ ಬಂದ ಎಷ್ಟು ವರ್ಷಗಳ ನಂತರ ಮಾಡಿದರು? ಅವರಿಗೆ ನಾಲ್ಕೈದು ಸಚಿವರನ್ನು ನೇಮಕ ಮಾಡಲಾಗದೇ ಮುಖ್ಯಮಂತ್ರಿಗಳೇ ಖಾತೆಯನ್ನು ಇಟ್ಟುಕೊಂಡಿದ್ದರು. ಬಿಜೆಪಿ ತಟ್ಟಿಯಲ್ಲಿ ಹೆಗಣ ಬಿದ್ದಿದೆ. ಮೊದಲು ಅದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios