ದಲಿತ ಸಚಿವರು-ಶಾಸಕರ ಸಭೆ ರದ್ದಾಗಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ದಲಿತ ಸಮುದಾಯಕ್ಕೆ ಸೇರಿದ ಸಚಿವರು ಮತ್ತು ಶಾಸಕರ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅದರಲ್ಲಿ ಹೈಕಮಾಂಡ್ ನಾಯಕರು ಭಾಗವಹಿಸಬೇಕು ಎಂಬ ಕಾರಣಕ್ಕಾಗಿ ಸಭೆ ಮುಂದೂಡಲಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು(ಜ.11): ದಲಿತ ಸಮುದಾಯಕ್ಕೆ ಸೇರಿದ ಸಚಿವರು, ಶಾಸಕರ ಸಭೆ ರದ್ದಾಗಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರೂ ಭಾಗವಹಿಸಬೇಕೆಂಬ ಕಾರಣಕ್ಕಾಗಿ ಆ ಸಭೆ ಮುಂದೂಡಲಾಗಿದೆಯಷ್ಟೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ದಲಿತ ಸಮುದಾಯಕ್ಕೆ ಸೇರಿದ ಸಚಿವರು ಮತ್ತು ಶಾಸಕರ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅದರಲ್ಲಿ ಹೈಕಮಾಂಡ್ ನಾಯಕರು ಭಾಗವಹಿಸಬೇಕು ಎಂಬ ಕಾರಣಕ್ಕಾಗಿ ಸಭೆ ಮುಂದೂಡಲಾಗಿದೆ. ಸಮುದಾಯದ ಸಮಸ್ಯೆಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು, ಶಾಸಕರನ್ನು ಕರೆದು ಮಾತನಾಡಲು ಆಗದು. ಪ್ರತ್ಯೇಕ ಸಭೆ ನಡೆಸುವ ಮೂಲಕವೇ ಆ ಕುರಿತು ಚರ್ಚೆ ನಡೆಸಬೇಕು. ಹೀಗಾಗಿ ಶಾಸಕರ, ಸಚಿವರ ಸಭೆ ಕರೆಯಲಾಗಿತ್ತು ಎಂದರು.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಸೆರೆ
ಡಿಕೆಶಿ ಬ್ರೇಕ್ ಹಾಕಿಸಿಲ್ಲ:
ಸಭೆಗೆ ಡಿ.ಕೆ. ಶಿವಕುಮಾರ್ ಅವರು ಬ್ರೇಕ್ ಹಾಕಿಸಿದರು ಎಂಬ ಆರೋಪಗಳೆಲ್ಲ ಸರಿಯಲ್ಲ. ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಗಮನಕ್ಕೆ ತರಲೇಬೇಕಾಗುತ್ತದೆ. ಹೀಗಿರುವಾಗ ಅವರ ಗಮನಕ್ಕೆ ತಾರದೆ ಸಭೆ ನಡೆಸಲಾಗುತ್ತಿದೆ ಎಂಬಂತಹ ವ್ಯಾಖ್ಯಾನ ತಪ್ಪು ಎಂದು ಹೇಳಿದರು.
ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ.. ಪ್ರಿಯಾಂಕ ಖರ್ಗೆ ಸಿಎಂ, ಮಲ್ಲಿಕಾರ್ಜುನ ಖರ್ಗೆ ಪಿಎಂ ಆಗೋದು ಅಷ್ಟೇ ಸತ್ಯ!
ಕಮಿಷನ್ ಆರೋಪಕ್ಕೆ ದಾಖಲೆ ನೀಡಲಿ:
ಸರ್ಕಾರದ ವಿರುದ್ಧ ಕೇಂದ್ರ ಭಾರೀ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ 60 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹಿಂದಿನ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಸರಿಯಾಗಿತ್ತು. ಕುಲಪತಿಗಳ ನೇಮಕಕ್ಕೆ ಎಷ್ಟು ಹಣ ಕೊಡಬೇಕು ಎಂಬುದನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಭಾಷಣದಲ್ಲಿ ನೀಡಿದ್ದ ವಿವರಗಳನ್ನು ನಾವು ಕೇಳಿದ್ದೇವೆ. ಹಾಗೆಯೇ, ಮಾಧ್ಯಮಗಳಲ್ಲಿ ಬಂದ ವರದಿಯನ್ನು ಪ್ರಸ್ತಾಪಿಸಿ ಹಿಂದಿನ ಸರ್ಕಾರದ ವಿರುದ್ದ ಆ ಆರೋಪ ಮಾಡಿದ್ದೆವು. ಕುಮಾರಸ್ವಾಮಿ ಅವರು ನಮ್ಮ ಸರ್ಕಾರದ ಮೇಲೆ ಎಷ್ಟು ಪರ್ಸೆಂಟ್ ಕಮಿಷನ್ ಆರೋಪವನ್ನಾದರೂ ಮಾಡಲಿ. ಮೊದಲು ಅದಕ್ಕೆ ದಾಖಲೆಗಳನ್ನು ಬಹಿರಂಗಪಡಿಸಲಿ. ಸುಮ್ಮನೆ ಹಿಟ್ ಆ್ಯಂಡ್ ರನ್ ಮಾಡಬಾರದು ಎಂದು ಹೇಳಿದರು.
ಜಾತಿ ಆಧಾರಿತ ಜನಗಣತಿಗೆ ವಿರೋಧ ಸಲ್ಲ:
ಸಚಿವ ಸಂಪುಟದಲ್ಲಿ ಜಾತಿ ಆಧಾರಿತ ಜನಗಣತಿ ಮಂಡನೆ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಜಾತಿ ಆಧಾರಿತ ಜನಗಣತಿ ಜಾತಿ ಗಣತಿಯಲ್ಲ. ಬದಲಿಗೆ ಅದು ಸಮೀಕ್ಷೆಯಷ್ಟೇ. ಅದನ್ನು ವಿರೋಧಿಸುತ್ತಿರುವವರು ಸಮೀಕ್ಷೆ ವರದಿ ವರದಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಸಚಿವ ಸಂಪುಟದಲ್ಲಿ ಸಮೀಕ್ಷೆ ವರದಿ ಇಟ್ಟಾಗ ಎಲ್ಲ ಮಾಹಿತಿಗಳೂ ತಿಳಿಯಲಿದೆ. ಈವರೆಗೂ ತಿಳಿಯದ ಮಾಹಿತಿ ಬಗ್ಗೆ ಆತಂಕ ಪಡುವುದು ಬೇಡ. ಪ್ರಬಲ ಸಮುದಾಯಗಳು ವರದಿಗೆ ಆಕ್ಷೇಪ ವ್ಯಕ್ತಪಡಿಸಬಾರದು ಎಂದರು.