ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡದ ಹೊರತಾಗಿಯೂ ಮುಂದಿನ ಶೈಕ್ಷಣಿಕ ವರ್ಷಕ್ಕೆ (2025-26) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ ಪ್ರಕಾಶ್ ಪಾಟೀಲ್‌ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ. 

ಬೆಂಗಳೂರು (ಮೇ.18): ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡದ ಹೊರತಾಗಿಯೂ ಮುಂದಿನ ಶೈಕ್ಷಣಿಕ ವರ್ಷಕ್ಕೆ (2025-26) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ ಪ್ರಕಾಶ್ ಪಾಟೀಲ್‌ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಸಚಿವ ಡಾ। ಶರಣ್‌ ಪ್ರಕಾಶ್‌ ಪಾಟೀಲ್ ಅವರು, ವೈದ್ಯಕೀಯ ಕೋರ್ಸ್‌ಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ವಿಷಯವನ್ನು ಶನಿವಾರ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಪಡಿಸಿದರು.

ಖಾಸಗಿ ಕಾಲೇಜುಗಳು ಶೇ.10 ರಿಂದ ಶೇ.15 ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಆದರೆ ರಾಜ್ಯ ಸರ್ಕಾರದ ಕಳೆದ ವರ್ಷ 10% ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಆದರೆ ಈ ವರ್ಷ ಯಾವುದೇ ಹೆಚ್ಚಳಕ್ಕೆ ಅವಕಾಶವಿಲ್ಲ ಎಂದು ಸಚಿವರು ತಿಳಿಸಿದರು. ಶುಲ್ಕ ಏರಿಕೆ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಕಳೆದ ವರ್ಷ 10% ಶುಲ್ಕ ಹೆಚ್ಚಳವಾಗಿತ್ತು. ಈ ವರ್ಷದಲ್ಲಿ ಯಾವುದೇ ಹೆಚ್ಚಳವಿಲ್ಲ. ಈ ಕುರಿತು ಒಪ್ಪಂದಕ್ಕೆ ಅತಿ ಶೀಘ್ರದಲ್ಲೇ ಸಹಿ ಹಾಕಲಾಗುವುದು ಎಂದು ಸಚಿವರು ಹೇಳಿದ್ದಾರೆ.

ವರ್ಗಾವಣೆ ಇನ್ನು ಇಲ್ಲ: ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆ ಇನ್ನು ಮುಂದೆ ಬಂದ್‌ ಮಾಡಿ ಕೌನ್ಸೆಲಿಂಗ್‌ ಆಧಾರಿತ ವರ್ಗಾವಣೆ ಮಾಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ್‌ ಪ್ರಕಾಶ್ ಪಾಟೀಲ್‌ ತಿಳಿಸಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ಇಲಾಖಾ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ಹೊಸ ವರ್ಗಾವಣೆ ವ್ಯವಸ್ಥೆಗೆ ಸಮಗ್ರ ಮಾರ್ಗಸೂಚಿ ರೂಪಿಸಬೇಕು. ಪ್ರಭಾವ ಮತ್ತು ಶಿಫಾರಸುಗಳ ಮೂಲಕ ಆಗುತ್ತಿದ್ದ ವರ್ಗಾವಣೆ ಪ್ರಕ್ರಿಯೆಗಳಿಗೆ ಕೊನೆ ಹಾಡಬೇಕಾಗಿದೆ. ಎಲ್ಲಾ ವರ್ಗಾವಣೆಗಳನ್ನು ಕೌನ್ಸೆಲಿಂಗ್ ಮೂಲಕ ಮಾಡಬೇಕು ಎಂದರು.

ಟ್ರಂಪ್‌ ಹೆಸರು ಹೇಳುವುದಕ್ಕೆ ಪ್ರಧಾನಿ ಮೋದಿಗೆ ಭಯ: ಸಚಿವ ದಿನೇಶ್‌ ಗುಂಡೂರಾವ್‌

ಇದು ಸಿಬ್ಬಂದಿಗೆ ಆದ್ಯತೆಯ ಸ್ಥಳಗಳಲ್ಲಿ ಹುದ್ದೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಇದೇ ವೇಳೆ ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಳಂಬವಿಲ್ಲದೆ ವರ್ಗಾಯಿಸುವಂತೆ ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು.