ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್: ಪಕ್ಷ ಕಟ್ಟಲು ಪಣತೊಟ್ಟ ಸಹೋದರರು
* ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸಹೋದರರು
* ಅಲ್ಲದೇ ಪಕ್ಷ ಕಟ್ಟಲು ಪಣತೊಟ್ಟ ಪ್ರಜ್ವಲ್-ನಿಖಿಲ್
* ಜೆಡಿಎಸ್ ಕಾರ್ಯಾಗಾರದಲ್ಲಿ ಪ್ರಜ್ವಲ್ ರೇವಣ್ಣ ಪಣ
ರಾಮನಗರ, (ಸೆ.30): ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿಯ ಜೆಡಿಎಸ್ ಕಾರ್ಯಾಗಾರದಲ್ಲಿ ಸಹೋದರರಾದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲದೇ ಪಕ್ಷ ಕಟ್ಟಲು ಪಣತೊಟ್ಟರು.
ಹೌದು...ಕಾರ್ಯಾಗಾರದಲ್ಲಿ ಇಂದು (ಸೆ.30) ಮೊದಲು ಮಾತನಾಡಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಅಣ್ಣ-ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ. ರಾಜ್ಯದಲ್ಲಿ ಪಕ್ಷ ಕಟ್ಟಲು ನಾವಿಬ್ಬರು ಒಂದಾಗಿ ಇದ್ದೇವೆ. ಕುಮಾರಣ್ಣ ಅವರನ್ನು ಮತ್ತೆ ಸಿಎಂ ಮಾಡಲು ನಾವು ಇಬ್ಬರು ಯಾವಾಗಲೂ ಒಂದಾಗಿ ಇರ್ತೀವಿ, ಪಕ್ಷದ ಕೆಲಸ ಮಾಡುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
'ಹಿಂದುತ್ವ, ಹಿಂದೂ ರಾಷ್ಟ್ರದ ಹೆಸರಿನಲ್ಲಿ ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ'
ಅಣ್ಣ ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ. ಧರ್ಮಸ್ಥಳ ಹಾಗೂ ಚಾಮುಂಡಿ ಬೆಟ್ಟಕ್ಕೆ ಹೋಗ್ತೀವಿ. ಮೈಸೂರಿಗೆ ಮೊದಲು ಹೋಗಿ ಕಾರ್ಯಕ್ರಮ ಮಾಡ್ತೀವಿ ಅಲ್ಲಿಂದಲೇ ಯುವಕರನ್ನು ಕಟ್ಟುವ ಕೆಲಸ ಮಾಡ್ತೀವಿ. ಕುಮಾರಣ್ಣಗೆ ಇವತ್ತು ಸಾಕಷ್ಟು ಸಂತೋಷವಾಗಿದೆ. ಕೇವಲ ನಾನು, ನಿಖಿಲ್ ಮಾತ್ರ ಅಲ್ಲ ರಾಜ್ಯದ ಯುವ ಜನತೆ ಕುಮಾರಸ್ವಾಮಿ ಅವರ ಜೊತೆಗಿದೆ ಎಂದರು.
ದೇವೇಗೌಡರು ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದಾರೆ. ಅವರಿಗೆ ಆಕಾಲಕ್ಕೆ ಪಕ್ಷ ಕಟ್ಟುವಾಗ ಇದ್ದ ಕಷ್ಟಗಳು ಈಗ ನಮಗಿಲ್ಲ. ಜೆಡಿಎಸ್ ಒಂದು ಜಾತಿ, ಜನಾಂಗದ ಪಕ್ಷ ಅಂತಾರೆ. ಆದರೆ ಯಾಕೆ ಆ ರೀತಿ ಮಾತಾಡ್ತೀರಾ? ಪ್ರತಿಯೊಂದು ಜನಾಂಗಕ್ಕೂ ಅವಕಾಶ ಕುಮಾರಣ್ಣ ಕೊಟ್ಟಿದ್ದಾರೆ. ಈ ವೇದಿಕೆ ಮೇಲೆ ಎಲ್ಲಾ ಜನಾಂಗದ ನಾಯಕರು ಕೂತಿದ್ದಾರೆ ಎಂದು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ನಡುವೆ ಸರಿ ಇಲ್ಲ. ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿದ್ದವಯ. ಇದೀಗ ಆ ಎಲ್ಲಾ ಚರ್ಚೆಗಳಿಗೆ ಪ್ರಜ್ವಲ್ ರೇವಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.