ಪಕ್ಷಕ್ಕೆ ಸೇರುವವರ ಪಟ್ಟಿ ಇನ್ನೂ ದೊಡ್ಡದಿದೆ. ಅದನ್ನು ಹಂತ-ಹಂತವಾಗಿ ಬಿಡುಗಡೆ ಮಾಡುತ್ತೇನೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ನ.22): ‘ಹಿರೇಕೆರೂರು ಮಾಜಿ ಶಾಸಕ ಯು.ಬಿ. ಬಣಕಾರ್‌, ತುಮಕೂರು ಗ್ರಾಮಾಂತರ ಜೆಡಿಎಸ್‌ ಮಾಜಿ ಶಾಸಕ ಎಚ್‌. ನಿಂಗಪ್ಪ, ಬಿಜಾಪುರದ ಮಲ್ಲಿಕಾರ್ಜುನ ರೋಣಿ, ಕೂಡ್ಲಗಿಯ ಡಾ.ಎನ್‌.ಟಿ. ಶ್ರೀನಿವಾಸ್‌ ಸೇರಿದಂತೆ ಹಲವರು ಕಾಂಗ್ರೆಸ್‌ ಸೇರಿದ್ದಾರೆ. ಪಕ್ಷಕ್ಕೆ ಸೇರುವವರ ಪಟ್ಟಿ ಇನ್ನೂ ದೊಡ್ಡದಿದೆ. ಅದನ್ನು ಹಂತ-ಹಂತವಾಗಿ ಬಿಡುಗಡೆ ಮಾಡುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಸೋಮವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ತಮ್ಮ ನೇತೃತ್ವದಲ್ಲಿ ನಡೆದ ಪಕ್ಷ ಸೇರ್ಪಡೆಯ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ವಿವಿಧ ನಾಯಕರನ್ನು ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಬಳಿಕ ಮಾತನಾಡಿದ ಅವರು, ಕೆಲವು ಸ್ನೇಹಿತರು ಕಾಂಗ್ರೆಸ್‌ ಖಾಲಿಯಾಗಿರುವ ಮನೆ, ಡಿ.ಕೆ. ಶಿವಕುಮಾರ್‌ ಎಲ್ಲರನ್ನೂ ಕರೆಯುತ್ತಿರುತ್ತಾರೆ. ಅಲ್ಲಿಗೆ ಯಾರು ಹೋಗುತ್ತಾರೆ ಎಂದು ಮಾತನಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿಇದೆ. ಇದನ್ನು ಒಂದೇ ಬಾರಿಗೆ ಬಿಡುಗಡೆ ಮಾಡುವುದಿಲ್ಲ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನರು ಆಕ್ರೋಶಗೊಂಡಿರುವಂತೆ ಕೆಲವು ನಾಯಕರೂ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.

Assembly Election: ಟಿಕೆಟ್‌ ಘೋಷಣೆ ಅಧಿಕಾರ ನಂಗೂ ಇಲ್ಲ, ಸಿದ್ದುಗೂ ಇಲ್ಲ: ಡಿಕೆಶಿ

ಹಿರೇಕೆರೂರಿನ ಮಾಜಿ ಶಾಸಕ ಯು.ಬಿ. ಬಣಕಾರ್‌ ಬಹಳ ಹಿಂದೆಯೇ ಪಕ್ಷ ಸೇರ್ಪಡೆಯಾಗಬೇಕಿತ್ತು. ಇದೀಗ ಬಿಜೆಪಿಯಲ್ಲಿ ಅಧಿಕಾರ ತ್ಯಾಗ ಮಾಡಿ ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ. ಬಣಕಾರ್‌ ಅವರ ಜತೆ ಮಂಜಣ್ಣ, ಶಿವರಾಜ ಹರಿಜನ್‌, ಮಹೇಂದ್ರ, ಹೇಮಣ್ಣ, ಷಣ್ಮುಗಯ್ಯ ಅವರು ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ ಎಂದರು.

ಇನ್ನು ಪರಿಶಿಷ್ಟಪಂಗಡ ಸಮುದಾಯಕ್ಕೆ ಸೇರಿದ ಹಿರಿಯ ನಾಯಕರ ಎನ್‌.ಟಿ ಬೊಮ್ಮಣ್ಣ ಅವರ ಪುತ್ರ ಡಾ. ಶ್ರೀನಿವಾಸ್‌ ಅವರು ಕೂಡ ನೂರಾರು ಬೆಂಬಲಿಗೆರೊಂದಿಗೆ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಇನ್ನು ವಿಜಯಪುರದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ರೋಣಿ ಅವರು ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇವರೆಲ್ಲರೂ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ದುಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್‌, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌ ಹಾಗೂ ಇತರ ನಾಯಕರು ಹಾಜರಿದ್ದರು.

Assembly Election: ಹಾಲಿ, ಮಾಜಿಗಳಿಗೆ ಹೊಸ ಮುಖಗಳಿಂದ ಟಕ್ಕರ್‌

ಬೇಷರತ್‌ ಸೇರ್ಪಡೆ

ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್‌ ಪಕ್ಷ ಸೇರುತ್ತಿದ್ದೇನೆ. ನಾನು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಹಲವು ಸ್ಥಾನಗಳಲ್ಲಿ ಕೆಲಸ ಮಾಡಿದ್ದೇನೆ. 2018ರಲ್ಲಿ ಬಿ.ಸಿ.ಪಾಟೀಲ್‌ ಅವರು ಕಾಂಗ್ರೆಸ್‌ ನಾಯಕರ ಬೆಂಬಲದಿಂದ ಗೆದ್ದಿದ್ದರು. ಆದರೆ ಅಧಿಕಾರ ಆಸೆಗೆ ಪಕ್ಷ ತೊರೆದರು. ಅದೇ ಹಿರೇಕೆರೂರು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರುತ್ತೇನೆ ಅಂತ ಬಿಜೆಪಿ ಮಾಜಿ ಶಾಸಕ ಯು.ಬಿ. ಬಣಕಾರ್‌ ತಿಳಿಸಿದ್ದಾರೆ. 

ದುಡ್ಡಿನ ಆಸೆಗೆ ಬಿಜೆಪಿ ಸೇರಿದ ಬಿ.ಸಿ.ಪಾ ಜನಪ್ರತಿನಿಧಿ ಸ್ಥಾನಕ್ಕೆ ಯೋಗ್ಯರಲ್ಲ: ಸಿದ್ದು

ಮೂರು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಲೂಟಿ ಮೂಲಕ 40 ಪರ್ಸೆಂಟ್‌ ಭ್ರಷ್ಟಸರ್ಕಾರ ಎಂದು ಹೆಸರು ಪಡೆದಿದೆ. ಹಣ ನೀಡದೆ ಈ ಸರ್ಕಾರದಲ್ಲಿ ಯಾವುದೇ ಕೆಲಸ, ನೇಮಕಾತಿ, ವರ್ಗಾವಣೆ ಆಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿವಿಧ ನಾಯಕರ ಪಕ್ಷ ಸೇರ್ಪಡೆ ಬಳಿಕ ಸೋಮವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಮಂತ್ರಿಗಳು ಲೂಟಿಗೆ ಇಳಿದಿದ್ದು, ರಾಜ್ಯ ಹಾಳು ಮಾಡುತ್ತಿದ್ದಾರೆ. ಮತ್ತೊಂದೆಡೆ ದ್ವೇಷದ ರಾಜಕಾರಣ ಮಾಡಿ ಸಮಾಜದಲ್ಲಿ ಸಾಮರಸ್ಯ ನಾಶ ಮಾಡುತ್ತಿದ್ದಾರೆ. ಜನ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ನಾಶವಾಗಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕರೆ ನೀಡಿದರು. ನಾವೆಲ್ಲರೂ ಬಿಜೆಪಿ ಸೋಲಿಸಲು ಹೋರಾಡಬೇಕು. ಹಿರೇಕೆರೂರು ಶಾಸಕ, ಸಚಿವ ಬಿ.ಸಿ. ಪಾಟೀಲ್‌ ಆಪರೇಷನ್‌ ಕಮಲಕ್ಕೆ ಒಳಗಾದ ವ್ಯಕ್ತಿ. ದುಡ್ಡಿನ ಆಸೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಆತ ಜನಪ್ರತಿನಿಧಿ ಆಗಲು ಯೋಗ್ಯರಲ್ಲ. ಬಣಕಾರ್‌ ಅವರು ಪಾಟೀಲ್‌ ಅವರನ್ನು ಸೋಲಿಸಲು ಕೃಷಿ ಮಾಡಲಿದ್ದಾರೆ ಎಂದು ಹೇಳಿದರು. ಇನ್ನು ಶ್ರೀನಿವಾಸ್‌, ಮಲ್ಲಿಕಾರ್ಜುನ ರೋಣಿ ಸೇರಿದಂತೆ ಎಲ್ಲರನ್ನೂ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು.