ಕೇವಲ ಇಬ್ಬರು‌ ಮೂವರಲ್ಲ, ಬಿಜೆಪಿಯಿಂದ ಅನೇಕ‌ ಜನ ಕಾಂಗ್ರೆಸ್‌ಗೆ ಆಗಮಿಸಲಿದ್ದಾರೆ. ಬಿಜೆಪಿಯಲ್ಲಿದ್ದು ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಅನೇಕರಿಗೆ ಆಗಿದೆ. ಹೀಗಾಗಿ ಕಾಂಗ್ರೆಸ್‌ನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

ಹುಬ್ಬಳ್ಳಿ(ಮಾ.07):  ಕೇವಲ ಇಬ್ಬರು‌ ಮೂವರಲ್ಲ, ಬಿಜೆಪಿಯಿಂದ ಅನೇಕ‌ ಜನ ಕಾಂಗ್ರೆಸ್‌ಗೆ ಸೇರಲಿದ್ದಾರೆ. ಈಗಾಗಲೇ ಹಲವರು ನಮ್ಮ ಸಂಪರ್ಕದಲ್ಲಿದ್ದು, ಸೂಕ್ತ ಸಮಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದಾಗ, ಕೇವಲ ಇಬ್ಬರು‌ ಮೂವರಲ್ಲ, ಬಿಜೆಪಿಯಿಂದ ಅನೇಕ‌ ಜನ ಕಾಂಗ್ರೆಸ್‌ಗೆ ಆಗಮಿಸಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಬಿಜೆಪಿಯಲ್ಲಿದ್ದು ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಅನೇಕರಿಗೆ ಆಗಿದೆ. ಹೀಗಾಗಿ ಕಾಂಗ್ರೆಸ್‌ನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಡಿಕೆಶಿ ಕಾಂಗ್ರೆಸ್‌ನ ಟ್ರಬಲ್ ಶೂಟ್ ಮಾಡಲಿ: ಪ್ರಹ್ಲಾದ್ ಜೋಶಿ

ಶೀಘ್ರವೇ ಫ್ಲಡ್ ಗೇಟ್ ಓಪನ್ ಆಗುತ್ತೆ ಎಂಬ ಮಾಜಿ‌ ಸಿಎಂ‌ ಜಗದೀಶ ಶೆಟ್ಟರ್ ಹೇಳಿಕೆ ಬಗ್ಗೆ ಕೇಳಿದಾಗ, ಈ ತಿಂಗಳು ಕಳೆದ ಮೇಲೆ‌ ಶೆಟ್ಟರ್ ಅವರಿಂದ ಪಶ್ಚಾತ್ತಾಪದ ಹೇಳಿಕೆ ಹೊರಬರುತ್ತೆ ನೋಡ್ತಾ ಇರಿ. ಬಿಜೆಪಿಯಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಆದರೆ ನಾವು ಅವರನ್ನು ಕರೆತಂದು ಟಿಕೆಟ್‌ ನೀಡಿದೆವು. ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿದೆವು. ಆದರೂ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡಲಿದ್ದಾರೆ ಎಂದು ಹೇಳಿದರು.