* ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ವಿಚಾರ * ಅಡ್ಡಗೋಡೆ ಮೇಲೆ ದೀಪವಿಟ್ಟ ಸಂಸದೆ * ಗುಟ್ಟು ಬಿಟ್ಟುಕೊಡದ ಸುಮಲತಾ ಅಂಬರೀಶ್
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ, (ಏ.28):ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಮಂಡ್ಯ ಸಂಸದೆ ಸುಮಲತಾ ಯಾವ ಪಕ್ಷ ಸೇರಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕಳೆದ ಹಲವು ದಿನಗಳಿಂದ ಸುಮಲತಾ ಬಿಜೆಪಿ ಸೇರ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಸುಮಲತಾ ಮಾತ್ರ ತಮ್ಮ ಮುಂದಿನ ನಡೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಅತ್ತ ಬಿಜೆಪಿ ನಾಯಕರು ಸುಮಲತಾ ಬಿಜೆಪಿ ಸೇರ್ತಾರೆ ಅಂತಿದ್ರೆ, ಇತ್ತ ಸುಮಲತಾ ಮಾತ್ರ ಜನಾಭಿಪ್ರಾಯ ಕೇಳ್ತೀನಿ ಅಂತ ಅಡ್ಡಗೋಡೆ ಮೇಲೆ ದೀಪವಿಟ್ಟ ಹೇಳಿಕೆ ನೀಡಿದ್ರು.
ಅನಿವಾರ್ಯತೆಗೆ ಸಿಲುಕಿ ಬಿಜೆಪಿ ಸೇರ್ತಾರೆ ರೆಬೆಲ್ ಲೇಡಿ
ಸ್ವಾಭಿಮಾನಿ ಸಂಸದೆ ಅಂತಲೇ ಹೆಸರು ಗಳಿಸಿರುವ ಸುಮಲತಾ ಅಂಬರೀಶ್ ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಯಾವ ಪಕ್ಷದ ಪರ ನಿಲ್ಲಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಆದ್ರೂ ಪಕ್ಷ ಸೇರ್ಪಡೆ ಸುಮಲತಾರಿಗೆ ಅನಿವಾರ್ಯವಾಗಿದೆ. ಆದ್ರೆ ಸುಮಲತಾ ಮುಂದಿರುವ ಆಯ್ಕೆ ಕೇವಲ ಬಿಜೆಪಿ ಮಾತ್ರ. ಯಾಕೆಂದರೆ ಸುಮಲತಾರನ್ನ ಕಾಂಗ್ರೆಸ್‌ಗೆ ಸೇರಿಸಿಕೊಳ್ಳೋದು ಸ್ವತಃ ಕೈ ನಾಯಕರಿಗೆ ಇಷ್ಟವಿಲ್ಲ ಎಂಬುದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುವ ಮಾತು.
ಬಿಜೆಪಿ ಸೇರ್ಪಡೆ ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ್ರಾ ಸುಮಲತಾ ಅಂಬರೀಶ್..?
ಅದಕ್ಕೆ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಆದೇಶ ಮೀರಿ ಸುಮಲತಾ ಚುನಾವಣೆ ಮಾಡಿದ್ದ ಕಾಂಗ್ರೆಸ್ ನಾಯಕರನ್ನ ಗೆಲುವಿನ ಬಳಿಕ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು. ಈ ಕಾರಣದಿಂದಾಗಿ ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಜಿಲ್ಲಾ ನಾಯಕರು ಸೇರಿದಂತೆ ಡಿಕೆಶಿವಕುಮಾರ್‌ರಿಗೂ ಇಷ್ಟವಿಲ್ಲವಂತೆ. ಇನ್ನು ಜೆಡಿಎಸ್ ವಿರುದ್ಧ ಸುಮಲತಾ ಭರ್ಜರಿ ಗೆಲುವು ದಾಖಲಿಸಿರೋದ್ರಿಂದ ಜೆಡಿಎಸ್ ಸೇರ್ಪಡೆ ಆಗದ ಮಾತು. ಹಾಗಾಗಿ ಸಂಸದೆ ಸುಮಲತಾರ ಮುಂದೆ ಕೇವಲ ಬಿಜೆಪಿ ಮಾತ್ರ ಉಳಿದಿದ್ದು, ಬಿಜೆಪಿ ಸೇರ್ಪಡೆ ಅನಿವಾರ್ಯವಾಗಿದೆ. ಕೆಲ ಬಿಜೆಪಿ ನಾಯಕರು ಸುಮಲತಾರನ್ನ ಪಕ್ಷಕ್ಕೆ ಆಹ್ವಾನ ನೀಡುರುವ ಬಗ್ಗೆ ನೀಡಿರುವ ಹೇಳಿಕೆಗಳು ಸುಮಲತಾ ಕಮಲ ಮುಡಿಯುವುದನ್ನ ಮತ್ತಷ್ಟು ಖಚಿತ ಪಡಿಸುತ್ತಿದೆ.
ಗುಟ್ಟು ಬಿಡದ ಸುಮಲತಾ
ಇನ್ನು ಸುಮಲತಾ ಮಾತ್ರ ಪಕ್ಷ ಸೇರ್ಪಡೆ ವಿಚಾರವಾಗಿ ಎಲ್ಲಿಯೂ ಸುಳಿವು ಬಿಟ್ಟುಕೊಡುತ್ತಿಲ್ಲ. ಎಂದಿನಂತೆ ತಮ್ಮದೆ ದಾಟಿಯಲ್ಲಿ ಬ್ಯಾಲೆನ್ಸಿಂಗ್ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆ. ಆದ್ರೆ ಬೆಂಬಲಿಗರು ಮಾತ್ರ ಈಗಾಗಲೇ ಬಿಜೆಪಿಯ ಹಲವು ಮುಖಂಡರ ಜೊತೆ ಗುರುತಿಸಿಕೊಂಡಿದ್ದಾರೆ. ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗೋದು ಪಕ್ಕಾ ಆಗಿದೆ.
ಯಾವ ಪಕ್ಷಕ್ಕೆ ಹೋದ್ರು ಸುಮಲತಾಗೆ ಬೆಂಬಲಿಗರ ಬೆಂಬಲ
ಬಿಜೆಪಿ ಸೇರ್ಪಡೆ ಸುದ್ದಿ ಬಳಿಕ ಮದ್ದೂರಿನಲ್ಲಿ ಸುಮಲತಾ ಮುಖಂಡರ ಸಭೆ ಕರೆದಿದ್ದರು. ಸಾಕಷ್ಟು ಕುತೂಹಲ ಮೂಡಿಸಿದ್ದ ಸಭೆಯಲ್ಲಿ
ಪಾಲ್ಗೊಂಡಿದ್ದ ಮುಖಂಡರು ಸುಮಲತಾಗೆ ಸಂಪೂರ್ಣ ಬೆಂಬಲ ಘೋಸಿದ್ರು. ನೀವು ಯಾವ ಪಕ್ಷಕ್ಕೆ ಹೋದರು ನಾವು ನಿಮ್ಮ ಜೊತೆ ಇರ್ತಿವಿ ಎಂದು ಬೆಂಬಲಿಗರು ಬಹಿರಂಗವಾಗಿಯೇ ಹೇಳಿದ್ರು. ಆದ್ರೆ ಸುಮಲತಾ ಅಂಬರೀಶ್ ಮಾತ್ರ, ಏನನ್ನು ಹೇಳದೆ ಎಲ್ಲರ ಅಭಿಪ್ರಾಯದಂತೆ ನಡೆಯುತ್ತೇನೆ ಎಂದು ಅಡ್ಡಗೋಡೆಮೇಲೆ ದೀಪವಿಟ್ಟಂತೆ ಮಾತನಾಡಿದ್ರು.
