ಮಂಡ್ಯ, (ನ.16): ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಮಂಡ್ಯ ಸಂಸದೆ ಸಮಲತಾ ಅಂಬರೀಶ್ ಅವರು ತಿರುಗೇಟು ಕೊಟ್ಟಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಅಧಿಕಾರಿಯೊಬ್ಬರ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ, ‘ದೇವೇಗೌಡರ ಕುಟುಂಬದವರನ್ನು ಸೋಲಿಸಲು ಸುಮಲತಾ ಅವರನ್ನು ಗೆಲ್ಲಿಸಿದ್ದಾರಷ್ಟೇ. ಮಂಡ್ಯದಲ್ಲಿ ಒಂದು ಕೆಲಸ ಮಾಡುವುದಕ್ಕೂ ಬಿಡುತ್ತಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆ ಯಮ್ಮಾ ಏನೂ ಕೆಲಸ ಮಾಡುವುದಿಲ್ಲ ಎಂದು ಅಧಿಕಾರಿಯ ಜೊತೆ ಮಾತನಾಡುತ್ತಾ ಟೀಕಿಸಿದ್ದರು.

ಇದಕ್ಕೆ ಇಂದು (ಸೋಮವಾರ) ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿ, ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತಾಡಲು ಅರ್ಹತೆಯೂ ಇಲ್ಲ, ಹಕ್ಕೂ ಇಲ್ಲ. ಮೈಸೂರಲ್ಲೇ ಮಾಡಬೇಕಾಗಿರುವ ಕೆಲಸ ಸಾಕಷ್ಟು ಇವೆ. ಎರಡು ಸಲ ಸಂಸದರಾಗಿರೋರು ಪ್ರತಾಪ್ ಸಿಂಹ ಬಳಸಿದ ಭಾಷೆ ಸಂಸದ ಸ್ಥಾನಕ್ಕೆ ಗೌರವ ತರುವಂಥದ್ದಲ್ಲ. ಪ್ರತಾಪ್ ಸಿಂಹ ಜವಾಬ್ದಾರಿ ಅರಿತು ಮಾತಾಡಲಿ ಎಂದು ಎಚ್ಚರಿಕೆ ನೀಡಿದರು.

ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್ ಸಿಂಹ

ಸಂಸದರ ಸ್ಥಾನಮಾನಕ್ಕೆ ತಕ್ಕಂತೆ ಗೌರವಯುತವಾಗಿ ಮಾತನಾಡಿದ್ದರೆ ಉತ್ತರ ನೀಡಬಹುದಿತ್ತು. ಆದರೆ, ಪೇಟೆ ರೌಡಿ ರೀತಿ ಹೇಳಿಕೆ ನೀಡಿದ್ದಾರೆ. ಅದಕ್ಕೆಲ್ಲ ನಾನ್ಯಾಕೆ ಉತ್ತರಿಸಲಿ? ನಾನು ಇಂತಹ ಹೇಳಿಕೆಗಳನ್ನ ಚುನಾವಣಾ ಸಮಯದಲ್ಲಿ ಎದುರಿಸಿದ್ದೇನೆ. ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ. ಅವರು ಹೋದ ಬಳಿಕ ಇಂತಹ ಹೇಳಿಕೆಗಳನ್ನ ಕೊಡ್ತಿದ್ದಾರೆ ಎಂದು ಸಿಂಹಗೆ ತಿರುಗೇಟು ಕೊಟ್ಟರು.

ಪ್ರತಾಪ್‌ಸಿಂಹ ಅವರು ನಮ್ಮ ಪಕ್ಕದ ಕ್ಷೇತ್ರದ ಸಂಸದರು. ನಮ್ಮ ಕ್ಷೇತ್ರದ ಬಗ್ಗೆ ಅವರು ಮಾತನ್ನಾಡುವುದು ಸರಿಯಲ್ಲ. ಒಬ್ಬ ಸಂಸದರು, ಇನ್ನೊಬ್ಬ ಸಂಸದರ ಬಗ್ಗೆ ಮಾತನಾಡಲು ಹಕ್ಕಿಲ್ಲ. ಸಂಸದರು ಸಂಸದರ ಭಾಷೆ ಬಳಸಿ ಮಾತನಾಡಿದರೆ ಸರಿ, ಅವರು ಪೇಟೆ ರೌಡಿ ರೀತಿಯಲ್ಲಿ ಮಾತನಾಡಿದರೆ ನಾನು ಉತ್ತರ ನೀಡುವುದಿಲ್ಲ ಎಂದರು.

ಪ್ರತಾಪ್‌ ಸಿಂಹ ಅವರ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನಮ್ಮ ಜಿಲ್ಲೆಯ ಜನ ಉತ್ತರ ಕೊಡುತ್ತಿದ್ದಾರೆ. ಅವರಿಗೆ ಏನು ಹೇಳಬೇಕಾಗಿತ್ತೊ ಅದನ್ನು ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.