Karnataka Politics ಸಿದ್ದರಾಮಯ್ಯ ಭೇಟಿಯಾಗಿರುವ ಬಗ್ಗೆ ಸ್ಪಷ್ಟನೆ ಕೊಟ್ಟ ಜೆಡಿಎಸ್ ಶಾಸಕ ಪುಟ್ಟರಾಜು
* ಜೆಡಿಎಸ್ ಶಾಸಕ ಪುಟ್ಟರಾಜು ಸಿದ್ದರಾಮಯ್ಯ ಭೇಟಿ
* ಸಿದ್ದರಾಮಯ್ಯ ಭೇಟಿಯಾಗಿರುವ ಬಗ್ಗೆ ಸ್ಪಷ್ಟನೆ ಕೊಟ್ಟ ಜೆಡಿಎಸ್ ಶಾಸಕ ಪುಟ್ಟರಾಜು
* ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ತಾರೆ ಎನ್ನುವ ಸುದ್ದಿಗೆ ತೆರೆ
ಮೈಸೂರು, (ಜ.30): ಮಂಡ್ಯ(Mandya) ಜಿಲ್ಲೆಯ ಮೇಲುಕೋಟೆ ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು(CS Puttaraju) ಗುರುವಾರ ಸಂಜೆ ಸಿದ್ದರಾಮಯ್ಯ(Siddaramaiah) ನಿವಾಸದಲ್ಲಿ ಕಾಣಿಸಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಲ್ಲದೇ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ತಾರೆ ಎನ್ನುವ ಚರ್ಚೆಗಳು ಶುರುವಾಗಿವೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸುವ ಜಮೀರ್ ಅಹಮ್ಮದ್ ಖಾನ್, ಮಾಜಿ ಸಚಿವ ಎಂಬಿ ಪಾಟೀಲ್ ಜೊತೆ ಸಿದ್ದರಾಮಯ್ಯ ನಿವಾಸದಲ್ಲಿ ಪುಟ್ಟರಾಜು ಕಾಣಿಸಿಕೊಂಡಿದ್ದ ಕುತೂಹಲಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳಯದಲ್ಲಿ ನಾನಾ ರೀತಿ ಸುದ್ದಿ ಹರಿದಾಡುತ್ತಿದೆ. ಸಾಲದಕ್ಕೆ ಪುಟ್ಟರಾಜು ಕಾಂಗ್ರೆಸ್ ಸೇರ್ತಾರೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.
Karnataka Politics ಸಿದ್ದರಾಮಯ್ಯ ಭೇಟಿ ಮಾಡಿದ ಮಂಡ್ಯ ಜೆಡಿಎಸ್ ಶಾಸಕ, ಎಚ್‌ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ
ಇನ್ನು ಈ ಬಗ್ಗೆ ಇಂದು(ಭಾನುವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ನನಗೆ ಜೆಡಿಎಸ್ ಬಿಡುವ ಎಳ್ಳಷ್ಟು ಆಲೋಚನೆಯು ಇಲ್ಲ. ಜಿಟಿ ದೇವೇಗೌಡರ ಹೆಸರಲ್ಲಿ ನನ್ನ ಹೆಸರು ತಳಕು ಹಾಕಬೇಡಿ ಎಂದು ಸ್ಪಷ್ಟಡಿಸಿದರು.
ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಅಲ್ಲೆ ಇದ್ದುಕೊಂಡು ಪಕ್ಷ ಸಂಘಟನೆ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತರುತ್ತೇನೆ. ದೇವೇಗೌಡರಿಗೆ ಹೇಳಿಯೇ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದೆ ಎಂದರು.
ನನ್ನ ಕ್ಷೇತ್ರದ ಧಾರ್ಮಿಕ ಸಮಾರಂಭ ಅದು. ಅದಕ್ಕೆ ಎಲ್ಲರನ್ನು ಕರೆಯುವುದು ವಾಡಿಕೆ. ಸಿದ್ದರಾಮಯ್ಯರನ್ನ ಕರೆದಾಗ ಕಾಂಗ್ರೆಸ್ ನಾಯಕರು ನನ್ನನ್ನು ಭೇಟಿಯಾದರು ಅಷ್ಟೇ. ಅದನ್ನು ಹೊರತುಪಡಿಸಿ ಬೇರೆನು ಇಲ್ಲ ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್ ಸೇರ್ತಾರೆ ಎನ್ನುವ ಗೊಂದಲಗಳಿಗೆ ಪುಟ್ಟರಾಜು ತೆರೆ ಎಳೆದರು.
ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ಕಾಂಗ್ರೆಸ್ ನಾಯಕರು ಈಗಾಗಲೇ ಹಲವು ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳ ಮಧ್ಯೆ ಪುಟ್ಟರಾಜು ಸಿದ್ದರಾಮಯ್ಯ ನಿವಾಸದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
ನಮ್ಮ ಪಕ್ಷದ ಕೆಲವು ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಾರೆ. ಪಾಪ ಏನೋ ಕೆಲಸ ಇರುತ್ತದೆ ಹೋಗಿರುತ್ತಾರೆ. ಏನೋ ಕಾರಣಕ್ಕೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಕೆಲವರು ಅವರಿಂದಲೇ ಗೆದ್ದಿದ್ದಾರೆ ಪಾಪ ಎಂದು ತಮ್ಮದೇ ಪಕ್ಷದ ಶಾಸಕರ ವಿರುದ್ದ ಕುಮಾರಸ್ವಾಮಿ ಗುರುವಾರ ಅಸಮಾಧಾನ ಹೊರ ಹಾಕಿದ್ದರು. ಈ ಹೇಳಿಕೆ ಹೊರ ಬಿದ್ದ ಬೆನ್ನಲ್ಲೇ ಸಂಜೆ ಪುಟ್ಟರಾಜು ಸಿದ್ದರಾಮಯ್ಯ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದರು.