ಬಿಜೆಪಿ ಸೇರಲು 5 ಶಾಸಕರಿಗೆ 50 ಕೋಟಿ ರು. ಆಮಿಷ: ಶಾಸಕ ಗಣಿಗ ರವಿ ಆರೋಪ
ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ನಡೆಸಿ ಮೈತ್ರಿ ಸರ್ಕಾರ ಕೆಡವಿದ್ದ ತಂಡ ಮತ್ತೆ ಸಕ್ರಿಯವಾಗಿದೆ. ಈ ತಂಡ ಕಾಂಗ್ರೆಸ್‌ನ ಐವರು ಶಾಸಕರನ್ನು ಭೇಟಿ ಮಾಡಿ 50 ಕೋಟಿ ರು. ಹಣ, ಮಂತ್ರಿ ಸ್ಥಾನ, ಅಮಿತ್ ಶಾ ಭೇಟಿ ಮಾಡಿಸುವ ಆಮಿಷ ಒಡ್ಡಿದೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು (ಅ.28): ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ನಡೆಸಿ ಮೈತ್ರಿ ಸರ್ಕಾರ ಕೆಡವಿದ್ದ ತಂಡ ಮತ್ತೆ ಸಕ್ರಿಯವಾಗಿದೆ. ಈ ತಂಡ ಕಾಂಗ್ರೆಸ್‌ನ ಐವರು ಶಾಸಕರನ್ನು ಭೇಟಿ ಮಾಡಿ 50 ಕೋಟಿ ರು. ಹಣ, ಮಂತ್ರಿ ಸ್ಥಾನ, ಅಮಿತ್ ಶಾ ಭೇಟಿ ಮಾಡಿಸುವ ಆಮಿಷ ಒಡ್ಡಿದೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿ ಮತ್ತೆ ಆಪರೇಷನ್ ಕಮಲ ಯತ್ನದ ಬಾಂಬ್ ಸಿಡಿಸಿದರು. ಈ ತಂಡದಲ್ಲಿ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಎನ್.ಆರ್.ಸಂತೋಷ್ ಜೊತೆಗೆ ಬೆಳಗಾವಿಯ ಓರ್ವ ಮಾಜಿ ಸಚಿವ, ಮೈಸೂರು ಭಾಗದ ಓರ್ವ ಮಾಜಿ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಬಿಜೆಪಿಯ ಇನ್ನಿತರೆ ನಾಯಕರುಗಳಿದ್ದಾರೆ. ಆ ತಂಡದವರು ನಮ್ಮ ಶಾಸಕರನ್ನು ಸಂಪರ್ಕಿಸಿದ ಆಡಿಯೋ, ವಿಡಿಯೋಗಳೂ ನಮ್ಮ ಬಳಿ ಇವೆ. ಅವುಗಳನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇವೆ ಎಂದರು.
ಹುಲಿ ಉಗುರು ನಕಲಿ, ಅಸಲಿ ಎಂದು ನಮಗೆ ಗೊತ್ತಾಗಲ್ಲ: ಮಧು ಬಂಗಾರಪ್ಪ
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಪಕ್ಷ ತೊರೆದರೆ ₹50 ಕೋಟಿ ಕೊಡುವ, ವಿಶೇಷ ವಿಮಾನ ಮಾಡಿ ಕರೆದೊಯ್ದು ಅಮಿತ್ ಷಾ ಭೇಟಿ ಮಾಡಿಸುವುದು, ಮಂತ್ರಿ ಮಾಡುವ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆದಿದೆ. ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಯಾರು ಕಾರಣವಾಗಿದ್ದರೋ ಅದೇ ತಂಡ ಮತ್ತೆ ಈಗ ಸಕ್ರಿಯವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಐವರು ಶಾಸಕರನ್ನು ಆ ತಂಡದವರು ಸಂಪರ್ಕಿಸಿದ ಆಡಿಯೋ, ವಿಡಿಯೋ ನಮ್ಮಲ್ಲಿದೆ ಎಂದರು.
ನಾಲ್ಕೂ ದಿಕ್ಕುಗಳಿಂದ ಆಪರೇಷನ್ ಶುರುವಾಗಿದೆ. ಇಂಥ ತಂಡದ ಆಮಿಷಕ್ಕೆ ನಮ್ಮವರು ಬಲಿಯಾಗಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಅಂಥ ಗ್ಯಾಂಗ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪಿಎ ಆಗಿದ್ದ ಎನ್.ಆರ್.ಸಂತೋಷ್ ಕೂಡ ಇದ್ದಾರೆ. ಗೋಲ್ಡ್ ಫಿಂಚ್ ಹೊಟೇಲ್‌ನಲ್ಲಿ ನಮ್ಮ ಶಾಸಕ ಮಿತ್ರರೊಬ್ಬರನ್ನು ಸಂತೋಷ್ ಭೇಟಿಯಾಗಿದ್ದಾರೆ. ಈ ಗ್ಯಾಂಗ್‌ನಲ್ಲಿ ಯಾರೆಲ್ಲಾ ಓಡಾಡುತ್ತಿದ್ದಾರೆ ಎಂಬ ದಾಖಲೆಗಳನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.
ಮತ್ತೊಂದೆಡೆ ವಿಧಾನಸೌಧದಲ್ಲಿ ಮಾತನಾಡಿ, ಸಂತೋಷ್ ಜೊತೆ ಬೆಳಗಾವಿ ಭಾಗದ ಓರ್ವ ಮಾಜಿ ಸಚಿವ, ಮೈಸೂರು ಭಾಗದ ಓರ್ವ ಮಾಜಿ ಎಂಎಲ್‌ಸಿ ಸೇರಿದಂತೆ ಇನ್ನು ಕೆಲ ನಾಯಕರು ಈ ತಂಡದಲ್ಲಿದ್ದಾರೆ. ಎಲ್ಲರ ಹೆಸರು ಹೇಳಲು ಈಗ ಆಗುವುದಿಲ್ಲ. ಸಮಯ ಬರಲಿ ಭೇಟಿ ಮಾಡಿದ್ದು ಯಾರ್‍ಯಾರು, ಇನ್ನೂ ಏನೆಲ್ಲಾ ಆಫರ್ ಕೊಟ್ಟಿದ್ದಾರೆ ಎಂಬ ಎಲ್ಲವನ್ನು ಬಹಿರಂಗಪಡಿಸುತ್ತೇನೆ. ಬಿಜೆಪಿಯವರು ಭೇಟಿ ಮಾಡಿದ್ದ ನಮ್ಮ ಐವರು ಶಾಸಕರೊಂದಿಗೆ ಸುದ್ದಿಗೋಷ್ಠಿ ಮಾಡಿ ವಿಡಿಯೋ ಸಹಿತ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.
ಸಮಯ ಬಂದಾಗ ವಿಡಿಯೋ ಬಿಡುಗಡೆ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಗಾಳ ಹಾಕುತ್ತಿದ್ದಾರೆ. ನಾನಾ ಆಮಿಷವೊಡ್ಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋಗಳಿದ್ದು, ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ.
ಚಿಕ್ಕಮಗಳೂರು: ಬಾಬಾ ಬುಡಾನ್ ದರ್ಗಾದ ಶಾಖಾದ್ರಿ ನಿವಾಸದಲ್ಲಿ ಜಿಂಕೆ, ಚಿರತೆ ಚರ್ಮ ಪತ್ತೆ!
ಗಣಿಗ ಹೇಳಿದ್ದೇನು?
- ಜೆಡಿಎಸ್- ಕಾಂಗ್ರೆಸ್ ಸರ್ಕಾರ ಬೀಳಿಸಿದ್ದ ಆಪರೇಷನ್ ಕಮಲ ತಂಡ ಮತ್ತೆ ಸಕ್ರಿಯ
- ಬಿಎಸ್‌ವೈ ಮಾಜಿ ಆಪ್ತಸಹಾಯಕ ಎನ್.ಆರ್. ಸಂತೋಷ್ ಇರುವ ತಂಡ ಇದು
- ಬೆಳಗಾವಿಯ ಮಾಜಿ ಸಚಿವ, ಮೈಸೂರು ಭಾಗದ ಮಾಜಿ ಎಂಎಲ್ಸಿ ಕೂಡ ಇದ್ದಾರೆ
- ಕಾಂಗ್ರೆಸ್‌ನ ಐವರು ಶಾಸಕರನ್ನು ಈ ತಂಡ ಈಗಾಗಲೇ ಸಂಪರ್ಕಿಸಿ ಆಮಿಷವೊಡ್ಡಿದೆ
- 50 ಕೋಟಿ ನಗದು, ವಿಶೇಷ ವಿಮಾನದಲ್ಲಿ ಅಮಿತ್ ಶಾ ಭೇಟಿ, ಮಂತ್ರಿ ಸ್ಥಾನದ ಆಸೆ ತೋರಿಸಿದೆ
- ಈ ಕುರಿತು ಆಡಿಯೋ, ವಿಡಿಯೋ ನಮ್ಮ ಬಳಿ ಇದೆ. ಐವರು ಶಾಸಕರ ಜತೆಗೇ ಸುದ್ದಿಗೋಷ್ಠಿ ಮಾಡುವೆ