ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಕಚ್ಚಾಟ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕರಿಗೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜ.17): ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸೀಟು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಬಿದ್ದವರಂತೆ ವಿವಿಧ ಹೇಳಿಕೆ ನೀಡುತ್ತಾ ಸರ್ಕಾರದಲ್ಲಿ ಹಲವರು ಬಣಗಳಾಗಿ ಬಡಿದಾಡುತ್ತಿದ್ದಾರೆ. ಈ ಗೊಂದಲ ತಾರಕಕ್ಕೇರಿದ ಬೆನ್ನಲ್ಲಿಯೇ ಮಧ್ಯಪ್ರವೇಶ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು, ನಿಮಗೆ ಕೊಟ್ಟ ಕೆಲಸವನ್ನು ನೀವು ಮಾಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ಜನರಿಗೆ ಕೊಟ್ಟು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುರ್ಚಿಗೆ ಕಂಟಕ ಎದುರಾಗಿದೆ. ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳು ಮುನ್ನೆಲೆಗೆ ಬರುತ್ತಿದ್ದಂತೆ, ಸಿದ್ದು ಬಣದ ನಾಯಕರು ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಜೊತೆಗೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯಗೊಂಡಿದ್ದು, ಸಿದ್ದು ಬಣದ ನಾಯಕರಲ್ಲಿ ಒಬ್ಬರು ಕೆಪಿಸಿಸಿ ಅಧ್ಯಕ್ಷ ಗಾದಿಗೇರುವ ಯೋಜನೆ ಹೆಣೆಯುತ್ತಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ಹಲವು ನಾಯಕರು ಬಣಗಳಾಗಿ ಹೇಳಿಕೆ ಕೊಡುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಬಣದ ವಿರುದ್ಧ ‘ಖರ್ಗೆ ಅಸ್ತ್ರ’ ಪ್ರಯೋಗಿಸಿದ ಡಿಕೆಶಿ!

ಇದೀಗ ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿದ ಗೊಂದಲ ವಿಚಾರವು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು. ನಿಮಗೆ ಕೊಟ್ಟ ಕೆಲಸ ಮೊದಲು ಮಾಡಿ. ಯಾವಾಗ ಏನು ಮಾಡಬೇಕು ಹೈಕಮಾಂಡ್‌ಗೆ ಗೊತ್ತಿದೆ. ಕೆಲವರು ಈ ಬಗ್ಗೆ ಹೇಳಿದ್ದಾರೆ. ಹೈಕಮಾಂಡ್ ಅದರ ಪ್ರಕಾರ ನಡೆಯೋದಿಲ್ಲ ಅಲ್ವಾ, ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಯಾವಾಗ ಏನು ನಿರ್ಣಯ ತೆಗೆದುಕೊಳ್ಳಬೇಕು ಅದು ನಮಗೆ ಬಿಟ್ಟಿದ್ದು. ಇದೆಲ್ಲ ಮಾತಾಡುವುದು ಪ್ರಯೋಜ‌ನ ಆಗುವುದಿಲ್ಲ. ಹೈಕಮಾಂಡ್ ಇದೆ, ನಾವೆಲ್ಲ ಇದ್ದೇವೆ, ನಾವು ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ವಾರ್ನಿಂಗ್ ನೀಡಿದರು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡೀಲಿ ಸಿಗಲ್ಲ: ಡಿ.ಕೆ.ಶಿವಕುಮಾರ್‌

ಇನ್ನು ಹೈಕಮಾಂಡ್ ಯಾವಾಗ ನಿರ್ಣಯ ತೆಗೆದುಕೊಳ್ಳಬೇಕು ಆಗ ತೆಗೆದುಕೊಳ್ಳುತ್ತದೆ. ನಿಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ದಯವಿಟ್ಟು ರಾಜ್ಯದಲ್ಲಿ ಯಾವುದೇ ಕಾಂಟ್ರವರ್ಸಿ ನಡೆಯಬಾರದು. ಆಗ ಈಗ ಯಾವಾಗ ಅದೆಲ್ಲ ಇಲ್ಲ. ಯಾವಾಗ ಮಾಡಬೇಕು ಬಿಡಬೇಕು ಹೈಕಮಾಂಡ್‌ಗೆ ಗೊತ್ತಿದೆ. ಆಗ ಸಿಎಂ ಚೇಂಜ್ ಆಗ್ತಾರೆ, ಈಗ ಡಿಸಿಎಂ ಚೇಂಜ್ ಆಗ್ತಾರೆ ಅದೆಲ್ಲ ಯಾರೂ ಹೇಳಬೇಡಿ. ನಾನಿದ್ದೇನೆ, ರಾಹುಲ್ ಗಾಂಧಿ ಇದ್ದಾರೆ. ಯಾವಾಗ ಏನು ಮಾಡಬೇಕು ಅಂತ ನಮಗೆ ಟಾರ್ಗೆಟ್ ಇರುತ್ತದೆ. ಅದನ್ನು ನೋಡಿಕೊಂಡು ನಾವೇ ನಿರ್ಣಯ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಕೈ ನಾಯಕರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.