ಒಳಮೀಸಲಾತಿ ಬಗ್ಗೆ ಖರ್ಗೆಯಿಂದ ಗೊಂದಲ ಸೃಷ್ಟಿ ಬೇಡ: ಸಂಸದ ಗೋವಿಂದ ಕಾರಜೋಳ
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೊಂದಲ ಸೃಷ್ಟಿಸಬಾರದೆಂದು ಸಂಸದ ಗೋವಿಂದ ಕಾರಜೋಳ ಸಲಹೆ ಮಾಡಿದ್ದಾರೆ.
ಚಿತ್ರದುರ್ಗ (ಆ.15): ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೊಂದಲ ಸೃಷ್ಟಿಸಬಾರದೆಂದು ಸಂಸದ ಗೋವಿಂದ ಕಾರಜೋಳ ಸಲಹೆ ಮಾಡಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆನೆಪದರ ಪ್ರಸ್ತಾಪಿಸಿ ಖರ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಒಳ ಮೀಸಲಾತಿ ಜಾರಿಗೆ ಸೂಚಿಸಿದೆ. ಕೆನೆಪದರ ಬಗ್ಗೆ ಪ್ರಾಸಂಗಿಕವಾಗಿ ಸಲಹೆ ನೀಡಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಖರ್ಗೆ ಸೂಚನೆ ನೀಡಲಿ. ಕಾಂಗ್ರೆಸ್ ಸಿಎಂ ಗಳ ಸಭೆ ಕರೆಯಲಿ ಎಂದರು.
ಮತಬ್ಯಾಂಕ್ ರಾಜಕಾರಣಕ್ಕಾಗಿ ಅನುಷ್ಠಾನಕ್ಕೆ ತರದಿರಲು ಖರ್ಗೆ ಪ್ರಯತ್ನ ಮಾಡಬಹುದು. ಶೋಷಿತ ಜನ ಮುಂದುವರೆದರೆ ಕಾಂಗ್ರೆಸ್ ಮತಬ್ಯಾಂಕ್ ಕಡಿತದ ಅಂಜಿಕೆ ಅವರಿಗಿರಬಹುದು. 101ಜಾತಿಗೆ ಅನುಕೂಲ ಆಗುವ ಕಾರ್ಯ ಅನುಷ್ಠಾನಗೊಳಿಸಬೇಕು. ತೆಲಂಗಾಣ ಸಿಎಂರಿಂದ ಈಗಾಗಲೇ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಿ ಎಂದರು.
ಬಿಜೆಪಿ ಆರ್‌ಎಸ್‌ಎಸ್ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಸ್ಸಿ, ಎಸ್ಟಿ ಒಳಮೀಸಲಾತಿ ಜಾರಿ ವೇಳೆ ಕೆನೆ ಪದರ ಜಾರಿ ಅಗತ್ಯ ಇಲ್ಲವೆಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಸುಪ್ರೀಂಕೋರ್ಟ್ ಪ್ರಾಸಂಗಿಕವಾಗಿ ಕೆನೆಪದರ ಬಗ್ಗೆ ಪ್ರಸ್ತಾಪಿಸಿದೆ. ಕೆನೆ ಪದರ ಜಾರಿ ಕಡ್ಡಾಯ ಎಂದು ಆದೇಶಿಸಿಲ್ಲ.
ಒಳಮೀಸಲಾತಿಯನ್ನ ಜಾರಿಗೊಳಿಸದಿದ್ದರೆ ಕಾವೇರಿಯಿಂದ-ಭೀಮಾ ನದಿಯವರೆಗೆ ಜನಾಂದೋಲನ: ಸಂಸದ ಕಾರಜೋಳ
ಇಂದು ಓರ್ವ ವೈದ್ಯ ಮನೆ ಬಾಡಿಗೆ ಕೇಳಿದರೆ ಜಾತಿ ಕೇಳುವ ಸ್ಥಿತಿಯಿದೆ. ಜಾತಿ ಗೊತ್ತಾದರೆ ಮನೆ ಬಾಡಿಗೆ ಕೊಡದಂತಹ ಪರಿಸ್ಥಿತಿ ಹಲವು ಕಡೆ ಸಮುದಾಯದ ಜನ ಎದುರುಸುತ್ತಿದ್ದಾರೆ. ನಮ್ಮ ಸರ್ಕಾರ ಕೆನೆ ಪದರ ನೀತಿ ಜಾರಿಗೆ ತರಲ್ಲ ಎಂದು ಮೋದಿ ಹೇಳಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್ ನಿರ್ಧಾರ ಸಹ ಕೈಗೊಂಡಿದೆ ಎಂದು ಗೋವಿಂದ ಕಾರಜೋಳ ಹೇಳಿದರು.