ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬೆಂಗಳೂರು (ಸೆ.30): ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಲವು ಸಚಿವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಭೇಟಿ ನೀಡಲಿದ್ದಾರೆ.

ಹೆಸರು, ಉದ್ದು, ತೊಗರಿ ಸೇರಿ ಎಲ್ಲ ಬಗೆಯ ಬೆಳೆಗಳಿಗೂ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ವರದಿ ಬಂದ ಬಳಿಕ ಪರಿಹಾರ ನೀಡುವಂತೆ ಮೋದಿ ಅವರಿಗೆ ಸವಿಸ್ತಾರವಾಗಿ ಪತ್ರ ಬರೆಯುತ್ತೇನೆ ಎಂದರು. ಪ್ರವಾಹದಿಂದಾಗಿ ಬಹಳಷ್ಟು ನಷ್ಟ ಉಂಟಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಬಳಿಕ ಯಾವ ರೀತಿ ರೈತರಿಗೆ ಸಹಾಯ ಮಾಡಬೇಕು ಎಂದು ಸಿದ್ದರಾಮಯ್ಯ ನಿರ್ಧರಿಸುತ್ತಾರೆ. ಮುತುವರ್ಜಿ ವಹಿಸಿ ಆದಷ್ಟು ಬೇಗ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿಯಿಂದ ಅಧಿಕಾರ ಚೋರಿ

‘ಮತಕಳ್ಳತನ ಮಾಡಿದ ಬಳಿಕ ಇದೀಗ ಬಿಜೆಪಿ, ತನ್ನ ವಿರೋಧಿ ಸರ್ಕಾರಗಳನ್ನು 30 ದಿನಗಳಲ್ಲಿ ಉರುಳಿಸಲು ಅಧಿಕಾರ ಕಳ್ಳತನಕ್ಕೆ (ಸತ್ತಾ ಚೋರಿ) ಕಾಯ್ದೆ ತಂದಿದೆ‘ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಅಧಿವೇಶನದಲ್ಲಿ ಮಂಡಿಸಿದ ಮಂತ್ರಿಗಳು 30 ದಿನ ಜೈಲಿನಲ್ಲಿದ್ದರೆ ಅವರನ್ನು ವಜಾಗೊಳಿಸುವ ಮಸೂದೆಯನ್ನು ತರಾಟೆಗೆ ತೆಗೆದುಕೊಂಡರು.

‘ಈ ಕಾನೂನು ನಾಗರಿಕರು ಚುನಾಯಿತ ಸರ್ಕಾರವನ್ನು ತೆಗೆದುಹಾಕುವ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಆ ಅಧಿಕಾರವನ್ನು ಇ.ಡಿ. ಸಿಬಿಐನಂತಹ ಸಂಸ್ಥೆಗಳಿಗೆ ನೀಡುತ್ತದೆ. ಇದು ಪ್ರಜಾಪ್ರಭುತ್ವದ ಮೇಲೆ ಬುಲ್ಡೋಜರ್‌ ಓಡಿಸುವ ರೀತಿಯಿದೆ’ ಎಂದು ವಾಗ್ದಾಳಿ ನಡೆಸಿದರು.