ಅಥಣಿ[ಡಿ.05]: ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಅನುಭವ ದೊಡ್ಡದು. ಇಬ್ಬರೂ ಸೇರಿದರೆ ಏನಾದರೂ ಮಾಡುತ್ತಾರೆ. ಇಬ್ಬರೂ ಹಳೆ ಹುಲಿಗಳು. ಒಂದೆಡೆ ಸೇರಿದರೆ ಏನೇನಾಗುತ್ತದೆಯೋ ಹೇಳುವುದಕ್ಕೆ ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.9ರ ನಂತರ ಸಿಹಿ ಸುದ್ದಿ ಇದೆ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು. ಖರ್ಗೆ ಅವರು ಕಲರ್‌ ಕಾಗೆ ಹಾರಿಸಲ್ಲ. ಹಾಗಾಗಿ ‘ಸಮಥಿಂಗ್‌ ಈಸ್‌ ದೇರ್‌’ ಅಂತಾರಲ್ಲ ಹಾಗೆ ಏನೋ ಆಗಲಿದೆ ಎಂದರು.

ಖರ್ಗೆಯವರ ಮಾತುಗಳನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಯಾವತ್ತೂ ಹಗುರವಾದ ಮಾತು ಹೇಳುವುದಿಲ್ಲ. ಅವರ ಮಾತುಗಳನ್ನು ಪಕ್ಷದ ಮುಖಂಡರು ಕೇಳುತ್ತಾರೆ. ಅವರದು ಲೂಸ್‌ ಟಾಕ್‌ ಅಲ್ಲ. ಊಹಾಪೋಹವನ್ನು ಹುಟ್ಟು ಹಾಕುವವರೂ ಅವರಲ್ಲ. ಅವರ ಪಕ್ಷದ ಕಾರ್ಯಕರ್ತರ ಪಾಲಿಗೆ ಸಿಹಿ ಸುದ್ದಿ ನೀಡಲು ಏನು ಮಾಡುತ್ತಾರೆ ಎನ್ನುವುದನ್ನು ನಾವೂ ಕಾತುರದಿಂದ ಕಾಯುತ್ತಿದ್ದೇವೆ ಎಂದರು.

ಆದರೆ ವಿರೋಧ ಪಕ್ಷಗಳ ಕನಸು ಭಗ್ನವಾಗುತ್ತದೆ. ಜತೆಗೆ ನಿರಾಶೆಯೂ ಆಗುತ್ತದೆ. ಡಿ.9ರ ಬಳಿಕ ಎರಡೂ ಪಕ್ಷಗಳಲ್ಲಿ ಬದಲಾವಣೆ ಆಗುತ್ತದೆ ಎಂದು ಭವಿಷ್ಯ ನುಡಿದರು. ಇದೇವೇಳೆ ಜೆಡಿಎಸ್‌ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಮನುಷ್ಯ ಆಸೆ ಪಡುವುದು ತಪ್ಪಿಲ್ಲ. ಸಿದ್ದರಾಮಯ್ಯ ಇನ್ನೊಮ್ಮೆ ಸಿಎಂ ಆಗುತ್ತೇನೆ ಎಂದು ಹೇಳುತ್ತಾರೆ. ನನಗೂ ಅವಕಾಶ ಸಿಕ್ಕರೆ ಪ್ರಧಾನಿಯಾಗಬೇಕು ಅಂತಾ ಆಸೆ ಇದೆ. ಆದರೆ ಆಗದಿರುವುದನ್ನು ಹೇಳುವುದು ಸರಿಯಲ್ಲ ಅಲ್ಲವೇ ಎಂದು ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

ಜೋಡೆತ್ತುಗಳು ಆಗಾಗ ಕೂಡುತ್ತವೆ:

ಡಿಕೆಶಿ-ಎಚ್‌ಡಿಕೆ ಹುಬ್ಬಳ್ಳಿ ಭೇಟಿಯಾದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ-ಎಚ್‌ಡಿಕೆ ಹೆಲಿಕಾಪ್ಟರ್‌ ಟೇಕ್‌ ಆಫ್‌ ಆಗುವವರೆಗೆ ಅವರು ಅಲ್ಲಿ ಕೂಡಿದ್ದರಂತೆ. ಜೋಡೆತ್ತುಗಳು ಆಗಾಗ ಕೂಡುತ್ತಿರುತ್ತಾರೆ. ಹಾಗೆಯೇ ಅವರಿಬ್ಬರು ಸೇರಿರಬಹುದು ಎಂದು ಹೇಳಿದರು.