Asianet Suvarna News Asianet Suvarna News

ಗ್ಯಾರಂಟಿ ನಂಬಿ ಮೈ ಮರೆಯಬೇಡಿ, ಬಿಜೆಪಿ ವೈಫಲ್ಯವನ್ನೂ ಬಿಚ್ಚಿಡಿ: ಮಲ್ಲಿಕಾರ್ಜುನ ಖರ್ಗೆ ಟಾಸ್ಕ್‌

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆಗಳ ಹೊರತಾಗಿಯೂ ಪಕ್ಷಕ್ಕಾದ ಸೋಲಿನಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌ ಇದೀಗ ಪಕ್ಷದ ಸಾಧನೆಯ ಜತೆಗೆ, ಬಿಜೆಪಿಯ ವೈಫಲ್ಯವನ್ನೂ ಸಮರ್ಥವಾಗಿ ಜನರ ಮುಂದಿಡುವಂತೆ ಮುಖಂಡರಿಗೆ ಕಿವಿಮಾತು ಹೇಳಿದೆ. 

Mallikarjun Kharge holds discussions with Lok Sabha coordinators urges them to increase connect with people gvd
Author
First Published Jan 13, 2024, 3:30 AM IST

ನವದೆಹಲಿ (ಜ.13): ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆಗಳ ಹೊರತಾಗಿಯೂ ಪಕ್ಷಕ್ಕಾದ ಸೋಲಿನಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌ ಇದೀಗ ಪಕ್ಷದ ಸಾಧನೆಯ ಜತೆಗೆ, ಬಿಜೆಪಿಯ ವೈಫಲ್ಯವನ್ನೂ ಸಮರ್ಥವಾಗಿ ಜನರ ಮುಂದಿಡುವಂತೆ ಮುಖಂಡರಿಗೆ ಕಿವಿಮಾತು ಹೇಳಿದೆ. ಕೇವಲ ಗ್ಯಾರಂಟಿ ನಂಬಿ ಕೂರಬೇಡಿ, ಬಿಜೆಪಿಯ ವೈಫಲ್ಯವನ್ನೂ ಜನರಿಗೆ ಎತ್ತಿ ತೋರಿಸಿ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ತಮ್ಮನ್ನು ಭೇಟಿಯಾದ ರಾಜ್ಯದ ಕೆಲ ಸಚಿವರಿಗೆ ಇಂಥದ್ದೊಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಸಂಯೋಜಕರಾಗಿ ನೇಮಕಗೊಂಡಿರುವ ಸಚಿವರನ್ನು ದೆಹಲಿಗೆ ಕರೆಸಿಕೊಂಡು ಕಾಂಗ್ರೆಸ್‌ ಹೈಕಮಾಂಡ್‌ ಗುರುವಾರವಷ್ಟೇ ತಂತ್ರಗಾರಿಕೆಯ ಪಾಠ ಮಾಡಿತ್ತು. ಜತೆಗೆ, ಚುನಾವಣಾ ಸಿದ್ಧತೆ ಕುರಿತು ಒಂದಷ್ಟು ಮಾರ್ಗದರ್ಶನವನ್ನೂ ನೀಡಿತ್ತು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ಸಂಬಂಧ ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಭೋಸರಾಜು, ಈಶ್ವರ ಖಂಡ್ರೆ, ವೆಂಕಟೇಶ್‌ ಮತ್ತಿತರರು ಶುಕ್ರವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿದ್ದು, ಈ ವೇಳೆ ಲೋಕಸಭಾ ಚುನಾವಣೆ ವಿಚಾರ ಮತ್ತೆ ಚರ್ಚೆಗೆ ಬಂತು ಎನ್ನಲಾಗಿದೆ. ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ನಡೆದ ಈ ಭೇಟಿ ವೇಳೆ ಖರ್ಗೆ ಅವರು ರಾಜ್ಯದ ಸಚಿವರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ: ಮೋದಿ ಸರ್ಕಾರದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಬೇಕಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕ ಬಹಳ ಮುಖ್ಯ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದರೆ ಪಕ್ಷಕ್ಕೆ ಅದರಿಂದ ಹಾನಿಯಾಗಲಿದೆ. ಹೀಗಾಗಿ ಸಚಿವರು ಬೂತ್‌ಮಟ್ಟದ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ಕಾರದ ಗ್ಯಾರಂಟಿಗಳನ್ನು ಸರಿಯಾಗಿ ತಲುಪಿಸಿ, ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಖರ್ಗೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆನ್ನಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಸೋಲು: ಜನಾರ್ದನ ರೆಡ್ಡಿ

ಇದೇ ವೇಳೆ ರಾಜ್ಯದಲ್ಲಿ ಐದು ಗ್ಯಾರಂಟಿ ಸ್ಕೀಂಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದ್ದರೂ, ಬರೇ ಗ್ಯಾರೆಂಟಿಯನ್ನೇ ನಂಬಿ ಕೂರಬೇಡಿ. ಪಕ್ಷದ ಸಿದ್ಧಾಂತ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವೈಫಲ್ಯಗಳನ್ನೂ ಎತ್ತಿತೋರಿಸುವ ಕೆಲಸ ಮಾಡಿ. ಈ ಬಾರಿ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ನಿರೀಕ್ಷಿಸಲಾಗಿದೆ ಎಂದು ಖರ್ಗೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios