ಯಡಿಯೂರಪ್ಪ ನಾಯಕತ್ವವನ್ನೇ ಕಡೆಗಣಿಸುವ ರಣತಂತ್ರಕ್ಕೆ ಬ್ರೇಕ್?
ಮಹಾರಾಷ್ಟ್ರ ಹಾಗೂ ಹರ್ಯಾಣದ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜ್ಯದ ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಆತಂಕವನ್ನೇ ಉಂಟು ಮಾಡಿದೆ.
ಬೆಂಗಳೂರು [ಅ.25]: ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಆತಂಕವನ್ನೇ ಉಂಟು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಂತ್ರಗಾರಿಕೆಯಿಂದ ಸ್ಥಳೀಯ ಮಟ್ಟದಲ್ಲಿ ಜನಪ್ರಿಯ ಹಾಗೂ ಪ್ರಭಾವಿ ನಾಯಕರು ಇಲ್ಲದಿದ್ದರೂ ಎಂಥ ಚುನಾವಣೆಯನ್ನಾದರೂ ಎದುರಿಸಬಹುದು ಎಂಬ ಅತೀವ ಆತ್ಮವಿಶ್ವಾಸದಲ್ಲಿದ್ದ ರಾಜ್ಯ ಬಿಜೆಪಿ ನಾಯಕರು ಮತ್ತು ಸಂಘ ಪರಿವಾರದ ಮುಖಂಡರಿಗೆ ಇದು ನಿರಾಸೆ ತಂದಿರುವುದಂತೂ ಸತ್ಯ.
ಈ ಫಲಿತಾಂಶದಿಂದ ಮುಂಬರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಿಸಿ ಗೆಲ್ಲುವುದು ಹೇಗೆ ಎಂಬ ಚಿಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಳೆಯದಲ್ಲಿ ಕಂಡು ಬಂದಿದ್ದರೂ, ಯಡಿಯೂರಪ್ಪ ನಾಯಕತ್ವವನ್ನೇ ಕಡೆಗಣಿಸಲು ಪಕ್ಷದ ಕೆಲವು ನಡೆಸುತ್ತಿದ್ದ ರಣತಂತ್ರಕ್ಕೆ ಇದರಿಂದ ಬ್ರೇಕ್ ಬೀಳಬಹುದು ಎಂಬ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಉಪಚುನಾವಣೆ ಅನುಮಾನ: ರಾಜಕೀಯ ವಲಯದಲ್ಲಿ ಗುಸುಗುಸು...
ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಕಳೆದ ಬಾರಿ ಅಷ್ಟೇನು ಜನಪ್ರಿಯ ನಾಯಕರಲ್ಲದ ದೇವೇಂದ್ರ ಫಡ್ನವೀಸ್ ಮತ್ತು ಮನೋಹರ್ ಕಟ್ಟರ್ ಅವರನ್ನು ಅನಿರೀಕ್ಷಿತ ಎಂಬಂತೆ ಮುಖ್ಯಮಂತ್ರಿಗಳನ್ನಾಗಿ ಮಾಡುವ ನಿರ್ಧಾರವನ್ನು ವರಿಷ್ಠರು ಕೈಗೊಂಡಿದ್ದರು. ಒಂದು ವೇಳೆ ಈ ಬಾರಿಯೂ ಆ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದಲ್ಲಿ ಅಂಥದ್ದೇ ಪ್ರಯೋಗವನ್ನು ಕರ್ನಾಟಕದಲ್ಲೂ ಮಾಡುವ ಪ್ರಸ್ತಾಪವಿತ್ತು. ಅಂದರೆ, ಯಡಿಯೂರಪ್ಪ ಅವರನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎಂಬ ಚಿಂತನೆ ಪಕ್ಷದ ಹಲವು ನಾಯಕರಲ್ಲಿತ್ತು. ಇದಕ್ಕೆ ಸಂಘ ಪರಿವಾರ ಮುಖಂಡರ ಒತ್ತಾಸೆಯೂ ಇತ್ತು.
ಬೈ ಎಲೆಕ್ಷನ್‌ನಲ್ಲಿ ಪಕ್ಷಾಂತರಿಗಳಿಗೆ ಸೋಲು: ರಾಜ್ಯದ ಅನರ್ಹ ಶಾಸಕರಿಗೂ ಇದೇ ಗತಿನಾ?
ಆದರೆ, ಸ್ಥಳೀಯ ಮಟ್ಟದಲ್ಲಿನ ಜನಪ್ರಿಯ ನಾಯಕರನ್ನು ಕಡೆಗಣಿಸಿ ಹೊಸ ಮುಖಕ್ಕೆ ಅವಕಾಶ ಕೊಟ್ಟಲ್ಲಿ ಅದನ್ನು ಜನರು ಸ್ವೀಕರಿಸುವುದು ಕಷ್ಟವಾದೀತು ಎಂಬ ಸಂದೇಶ ಈ ಚುನಾವಣಾ ಫಲಿತಾಂಶದಿಂದ ಹೊರಬಿದ್ದಂತಾಗಿದೆ. ಜೊತೆಗೆ ಜಾತಿ ಸಮೀಕರಣವನ್ನು ಮಾಡದೇ ಇದ್ದರೆ ನಿರೀಕ್ಷಿತ ಮಟ್ಟದ ಗೆಲುವು ಪಡೆಯುವುದು ಸುಲಭವಲ್ಲ ಎಂಬ ಅಂಶವೂ ಈ ಫಲಿತಾಂಶದಿಂದ ವ್ಯಕ್ತವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಭದ್ರತೆ ದೃಷ್ಟಿಯಿಂದ ಎರಡು ರಾಜ್ಯಗಳ ಫಲಿತಾಂಶ ಪಕ್ಷದ ನಾಯಕರಿಗೆ ನಿರಾಸೆ ಉಂಟು ಮಾಡಿದೆ. ಮೊದಲೇ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಿಲ್ಲ ಎಂಬ ಆಕ್ರೋಶ ರಾಜ್ಯವ್ಯಾಪಿ ಕಾಣಿಸಿಕೊಂಡಿದೆ. ಇದರ ನಡುವೆ ಡಿ.5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳಲೇಬೇಕು ಎಂಬ ಅನಿವಾರ್ಯತೆ ಎದುರಾಗಿದೆ. ಇದೆಲ್ಲದರ ಪರಿಣಾಮ ಉಪಚುನಾವಣೆಯಲ್ಲಿ ಒಂದು ವೇಳೆ ಕಡಮೆ ಸ್ಥಾನಗಳು ಬಂದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೇ ಸಂಚಕಾರ ಬಂದೊದಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಚರ್ಚೆ ಶುರುವಾಗಿದೆ.
ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: