Asianet Suvarna News Asianet Suvarna News

Shiv Sena Party Property: ಯಾರ ಪಾಲಾಗಲಿದೆ ಶಿವಸೇನೆ ಹೆಸರಲ್ಲಿರುವ ಭಾರೀ ಆಸ್ತಿ?

ಚುನಾವಣಾ ಆಯೋಗ ಈಗಾಗಲೇ ಏಕನಾಥ್‌ ಶಿಂಧೆ ಬಣಕ್ಕೆ ಶಿವಸೇನೆಯ ಚುನಾವಣಾ ಗುರು ಹಾಗೂ ಹೆಸರನ್ನು ಬಳಸಿಕೊಳ್ಳಲು ಮಾನ್ಯ ಮಾಡಿದೆ. ಇದರ ಬೆನ್ನಲ್ಲಿಯೇ ಶಿವಸೇನೆಯ 191 ಕೋಟಿ ರೂಪಾಯಿ ಅಸ್ತಿ ಹಾಗೂ ದೇಶಾದ್ಯಂತ ಇರುವ 362 ಕಚೇರಿಗೆ ಮಾಲೀಕರು ಯಾರು ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.

Maharashtra Shiv Sena Party Property 191 crores at stake Uddhav Thackeray Eknath Shinde san
Author
First Published Feb 25, 2023, 5:11 PM IST

ನವದೆಹಲಿ (ಫೆ.25): ಕೇಂದ್ರ ಚುನಾವಣಾ ಆಯೋಗ ಏಕನಾಥ್‌ ಶಿಂಧೆ ಬಣವನ್ನೇ ನಿಜವಾದ ಶಿವಸೇನೆ ಎಂದು ಘೋಷಣೆ ಮಾಡಿದೆ. ಅದರೊಂದಿಗೆ ಶಿವಸೇನೆಯ ಚುನಾವಣಾ ಗುರುತು ಹಾಗೂ ಹೆಸರನ್ನು ಚುನಾವಣೆಗಳಲ್ಲಿ ಹಾಗೂ ಪ್ರಚಾರದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿದೆ. ಇದರೊಂದಿಗೆ ಇನ್ನೊಂದು ಸಮಸ್ಯೆ ಕೂಡ ಉದ್ಭವವಾಗಿದೆ. ಈಗಾಗಲೇ ಶಿವಸೇನೆಯ ಹೆಸರಲ್ಲಿ ಒಟ್ಟು 191 ಕೋಟಿ ರೂಪಾಯಿಯ ಆಸ್ತಿ ಇದೆ. ಇದನ್ನು ಏಕನಾಥ್‌ ಶಿಂಧೆ ಅಥವಾ ಶಿವಸೇನೆಯ ಉದ್ದವ್‌ ಠಾಕ್ರೆ ಬಣದ ಮುಖ್ಯಸ್ಥರಾಗಿವ ಉದ್ದವ್‌ ಠಾಕ್ರೆ ನಡುವೆ ಯಾರಿಗೆ ಹಂಚಿಕೆಯಾಗಲಿದೆ ಎನ್ನುವ ಕುತೂಹಲವಿದೆ. ಈ ನಡುವೆ ಶಿಂಧೆ ಬಣ ನಾವು ಬಾಳಾಸಾಹೇಬ್‌ ಠಾಕ್ರೆ ಅವರ ವಿಚಾರಧಾರೆಗಳಿಗೆ ಮಾತ್ರವೇ ಮಾಲೀಕರು, ಶಿವಸೇನೆ ಹೆಸರಲ್ಲಿರುವ ಆಸ್ತಿ ನಮಗೆ ಬೇಡ ಎಂದು ತಿಳಿಸಿದೆ. ಆದರೆ, ಅವರು ಹೀಗೆ ಹೇಳಿದ ಮಾತ್ರಕ್ಕೆ ಉದ್ಧವ್‌ ಠಾಕ್ರೆ ಬಣಕ್ಕೆ ಶಿವಸೇನೆಯ ಆಸ್ತಿಯನ್ನು ಬಳಸಿಕೊಂಡು ರಾಜಕೀಯ ಮಾಡೋದು ಸಾಧ್ಯವಾಗೋದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಗಿದ ಬಳಿಕ ಇವುಗಳಿಗೆ ತಾರ್ಕಿಕ ಅಂತ್ಯ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಶಿವಸೇನೆಯು ಪ್ರಸ್ತುತ 191.82 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದೆ, ದಾದರ್‌ನಲ್ಲಿರುವ ಶಿವಸೇನೆ ಕಟ್ಟಡವೂ ಉದ್ಧವ್ ಬಣದಿಂದ ಆಕ್ರಮಿಸಿಕೊಂಡಿದೆ. ಏಕನಾಥ್‌ ಶಿಂಧೆ ಹೆಸರಿನ ನಿಜವಾದ ಶಿವಸೇನೆ, ಯಾವ ಕಟ್ಟಡದಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ. ಬಾಳಾಸಾಹೇಬ್ ಠಾಕ್ರೆ ಅವರಿಗೆ ಅತ್ಯಂತ ಆತ್ಮೀಯರಾಗಿದ್ದ ಏಕನಾಥ್ ಶಿಂಧೆ ಅವರು ಆರು ತಿಂಗಳ ಹಿಂದೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಂದ ಬೇರ್ಪಟ್ಟು, ಬಹುತೇಕ ಶಿವಸೇನೆ ಶಾಸಕದೊಂದಿಗೆ ಬಿಜೆಪಿ ಜೊತೆ ಸೇರಿದ್ದರು. ಈಗ ಬಿಜೆಪಿ ಬೆಂಬಲದೊಂದಿಗೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.

ಫೆಬ್ರವರಿ 17 ರಂದು, ಉದ್ದವ್‌ ಠಾಕ್ರೆ ಬಣಕ್ಕೆ ದೊಡ್ಡ ಅಘಾತ ನೀಡಿದ್ದ ಚುನಾವಣಾ ಆಯೋಗವು, ಶಿವಸೇನೆ ಎನ್ನುವ ಹೆಸರು ಮತ್ತು ಬಿಲ್ಲು ಹಾಗೂ ಬಾಣದ ಚಿಹ್ನೆಯನ್ನು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರಿಗೆ ನೀಡಿತ್ತು. ಅದರ ಬೆನ್ನಲ್ಲಿಯೇ ಏಕನಾಥ್‌ ಶಿಂಧೆ ಅವರನ್ನು ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗುದೆ. ಚೀಫ್‌ ಲೀಡರ್‌ ಅಥವಾ ಮುಖ್ಯ ನಾಯಕ ಎನ್ನುವ ಹುದ್ದೆ ಶಿವಸೇನೆ ಮುಖ್ಯಸ್ಥ ಸ್ಥಾನಕ್ಕೆ ಸಮಾನವಾಗಿದೆ.

ಚುನಾವಣಾ ಆಯೋಗದ ನಿರ್ಧಾರದ ನಂತರ ಈಗ ಹೊಸ ಚರ್ಚೆ ಆರಂಭವಾಗಿದೆ. ಶಿವಸೇನಾ ಭವನ ಸೇರಿದಂತೆ ರಾಜ್ಯಾದ್ಯಂತ ಪಕ್ಷದ ಕಚೇರಿಗಳು ಯಾರಿಗೆ ಸೇರಿದ್ದು ಎನ್ನುವ ಕುತೂಹಲ ಆರಂಭವಾಗಿದೆ. ಶಿವಸೇನೆಯ ಹೆಸರಿನಲ್ಲಿ ಠೇವಣಿ ಇಟ್ಟಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಪಕ್ಷದ ನಿಧಿ ಮತ್ತು ಆಸ್ತಿ ಯಾರಾ ಪಾಲಾಗಲಿದೆ? ಚುನಾವಣಾ ಆಯೋಗದ ಬಳಿ ಲಭ್ಯವಿರುವ ದಾಖಲೆಗಳ ಪ್ರಕಾರ, ಶಿವಸೇನೆ 191 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದೆ. ಇದಲ್ಲದೆ, ಮುಂಬೈನಲ್ಲಿ 280 ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ 82 ಕಚೇರಿಗಳನ್ನು ಹೊಂದಿದೆ.

ಹಳೆ ಶಿವಸೇನೆಯಿಂದ ಬಾಳಾಸಾಹೇಬರ ವಿಚಾರಗಳು ಮಾತ್ರ ಬೇಕು ಎಂದು ಸಿಎಂ ಏಕನಾಥ್ ಶಿಂಧೆ ಹೇಳುತ್ತಿದ್ದರೂ ಈಗಿರುವ ಸಂವಿಧಾನದ ಪ್ರಕಾರ ಪಕ್ಷ ವಹಿಸಿ ಖಜಾಂಚಿ ನೇಮಕವಾದ ಬಳಿಕ ಸಂಪೂರ್ಣ ಆಸ್ತಿ, ನಿಧಿ ಹೊಸ ಶಿವಸೇನೆ ಪಾಲಾಗಲಿದೆ. ಅದಲ್ಲದೆ, ಮುಂದಿನ ದಿನಗಳಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರ ಹಲವು ನಗರಗಳಲ್ಲಿ ಪಾಲಿಕೆ ಚುನಾವಣೆ ಇದೆ. ಇದಕ್ಕಾಗಿ ಹಣ ಅಗತ್ಯವಿರುತ್ತದೆ. ಆಗ ಶಿಂಧೆ ಅವರ ಶಿವಸೇನೆ ಈ ಹಣವನ್ನು ಬಳಸಿಕೊಳ್ಳಲಿದೆಯೇ ಇಲ್ಲವೇ ಎನ್ನುವ ಕುತೂಹಲವಿದೆ.

ಸೇನೆಯ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್ ಸ್ಫೋಟಕ ಆರೋಪ

ರಾಜಕೀಯ ತಜ್ಞರ ಪ್ರಕಾರ ಶಿಂಧೆ ಬಣ ಇದೀಗ ಉದ್ಧವ್ ಬಣದ ಸಂಸದರು ಮತ್ತು ಶಾಸಕರ ಮೇಲೂ ಕಣ್ಣಿಟ್ಟಿದೆ. ಫೆಬ್ರವರಿ 27 ರಂದು ಪ್ರಾರಂಭವಾಗುವ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಪಕ್ಷದ ಎಲ್ಲಾ ಶಾಸಕರು ಮತ್ತು ಸಂಸದರಿಗೆ ವಿಪ್ ಜಾರಿ ಮಾಡಲಾಗುತ್ತದೆ. ಉದ್ಧವ್ ಠಾಕ್ರೆ ಅವರೊಂದಿಗೆ ಕೇವಲ 10 ಶಾಸಕರು ಮತ್ತು 2-3 ಸಂಸದರು ಮಾತ್ರ ಉಳಿದಿದ್ದಾರೆ, ಈ ವಿಪ್ ನಂತರ ಅವರು ಕೂಡ ಪಕ್ಷವನ್ನು ತೊರೆದು ಶಿಂಧೆ ಅವರ ನಿಜವಾದ ಶಿವಸೇನೆ ಸೇರಿಕೊಳ್ಳಬೇಕಾಗುತ್ತದೆ.

'ಶಿವಸೇನೆ' ಕುರಿತಾಗಿ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ!

ಶಿಂಧೆ ಅವರು ಪಕ್ಷದ ಆಸ್ತಿ ಮತ್ತು ನಿಧಿಯನ್ನು ತಮಗೆ ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಉದ್ಧವ್ ಠಾಕ್ರೆ ಗುಂಪಿನ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದ ವಕೀಲ ಕಪಿಲ್ ಸಿಬಲ್, ಶಿವಸೇನೆ ಕಚೇರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು. ಚುನಾವಣಾ ಆಯೋಗದ ನಿರ್ಧಾರಕ್ಕೆ ತಡೆ ನೀಡದೇ ಇದ್ದರೆ, ಶಿಂಧೆ ಅವರ ಶಿವಸೇನೆ ಬ್ಯಾಂಕ್‌ ಖಾತೆಗಳನ್ನೂ ಕೂಡ ಪಡೆದುಕೊಳ್ಳಲಿದೆ. ಈಗ ಇದೆಲ್ಲವೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ನಿರ್ಧಾರವಾಗುವ ನಿರೀಕ್ಷೆಯಿದೆ. ಮುಂದಿನ ವಿಚಾರಣೆ ಮಾರ್ಚ್‌ 15ಕ್ಕೆ ನಿಗದಿಯಾಗಿದೆ.
 

Follow Us:
Download App:
  • android
  • ios