ನವದೆಹಲಿ[ನ.24]: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಿಂದ ಬಿಜೆಪಿ ಹಿಂದಕ್ಕೆ ಸರಿದ ಬಳಿಕ, ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಪಕ್ಷಗಳು ಒಂದಾಗಿ ಸರ್ಕಾರ ರಚನೆಯ ಕಸರಸತ್ತನ್ನು ಹಲವು ದಿನಗಳಿಂದ ನಡೆಸಿಕೊಂಡೇ ಬಂದಿದ್ದವು. ಆದರೆ ಇಂಥ ಬೆಳವಣಿಗೆಗಳ ನಡುವೆಯೇ ಸರ್ಕಾರ ರಚನೆಗೆ ಬಿಜೆಪಿ ಪಾಳಯದಲ್ಲಿ ಒಳಗೊಳಗೇ ಏನೋ ನಡೆಯುತ್ತಿದೆ ಎಂಬ ಸಣ್ಣ ಸುಳಿವು ನೀಡುವ ಕೆಲ ಘಟನೆಗಳೂ ನಡೆದಿದ್ದವು. ಶನಿವಾರ ಅಜಿತ್‌ ಪವಾರ್‌ ಬಣದ ಎನ್‌ಸಿಪಿ ಶಾಸಕರ ಜೊತೆಗೂಡಿ ಬಿಜೆಪಿ ಸರ್ಕಾರ ರಚನೆ ಮಾಡಿದ ಬಳಿಕ ಈ ಘಟನೆಗಳು ಮತ್ತೆ ಉಭಯ ಪಕ್ಷಗಳ ನಾಯಕರ ನಡುವಿನ ಮೈತ್ರಿಯ ಒಂದಿಷ್ಟುಹೆಜ್ಜೆ ಗುರುತನ್ನು ನೆನಪಿಸಿವೆ.

ಕೊಟ್ಟ ಹೊಡೆತಕ್ಕಿಂತ ದೊಡ್ಡ ಏಟು ತಿನ್ನುತ್ತಾ ಬಿಜೆಪಿ? NCP ಮುಂದಿನ ಆಯ್ಕೆ ಹೀಗಿದೆ

1. ಸಂಸತ್ತಿನಲ್ಲಿ ಎನ್‌ಸಿಪಿಗೆ ಮೋದಿ ಹೊಗಳಿಕೆ

ರಾಜ್ಯಸಭೆಯ 250ನೇ ಕಲಾಪ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಎನ್‌ಸಿಪಿ ಹಾಗೂ ಬಿಜೆಡಿ ಪಕ್ಷಗಳು ಸಂಸತ್ತಿನ ನಡಾವಳಿಗಳನ್ನು ಶಿಸ್ತಿನಿಂದ ಪಾಲಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೋದಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

2. ಮೋದಿ- ಪವಾರ್‌ ಭೇಟಿ

ಎನ್‌ಸಿಪಿ ಸಂಸದರನ್ನು ಮೋದಿ ಹೊಗಳಿದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟ ಆಲಿಸುವಂತೆ ಆಗ್ರಹಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ಶರದ್‌ ಪವಾರ್‌ ಭೇಟಿಯಾಗಿದ್ದರು. ಈ ಭೇಟಿ ವೇಳೆ ಅಮಿತ್‌ ಶಾ ಕೂಡ ರಾಜ್ಯಸಭೆ ಕಲಾಪದಿಂದ ಎದ್ದುಬಂದು ಮೋದಿ, ಕಚೇರಿ ಪ್ರವೇಶಿಸಿದ್ದರು. ಇದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿತ್ತು.

3. ಸಕ್ಕರೆ ಕಾರ್ಖಾನೆ ಕಾರ್ಯಕ್ರಮಕ್ಕೆ ಆಹ್ವಾನ

ಮೋದಿ ಅವರನ್ನು ರಾಜಕೀಯವಾಗಿ ವಿರೋಧಿಸುವ ಶರದ್‌ ಪವಾರ್‌, ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಆಯೋಜಿಸಿರುವ ಸಮಾರಂಭಕ್ಕೆ ಮೋದಿ ಅವರನ್ನು ಆಹ್ವಾನಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಅಲ್ಲದೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಬಳಿಕ ಮಾತನಾಡಿದ್ದ ಪವಾರ್‌, ಶಿವಸೇನೆಗೆ 170 ಶಾಸಕರ ಬೆಂಬಲ ಇದೆಯೋ ಇಲ್ಲವೋ ಎನ್ನುವುದು ನನನಗಂತೂ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು