ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.  ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಗೃಹ ಖಾತೆ ನೀಡಲಾಗಿದೆ. ಸಚಿವ ಸಂಪುಟ ವಿಸ್ತರಣೆ ಸಂಪೂರ್ಣ ವಿವರ ಇಲ್ಲಿವೆ.

ನವದೆಹಲಿ(ಆ.14): ಮಹಾರಾಷ್ಟ್ರ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಗ್ಗಾಂಟಾಗಿ ಉಳಿದಿತ್ತು. ಇತ್ತೀಚೆಗೆ ಬಿಜೆಪಿಯ 9 ಹಾಗೂ ಸಿಎಂ ಏಕನಾಥ್ ಶಿಂಧೆ ಬಣದ 9 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಖಾತೆ ಹಂಚಿಕೆ ವಿಳಂಭವಾಗಿತ್ತು. ಇದೀಗ ಕೊನೆಗೂ ಮಹಾರಾಷ್ಟ್ರ ಸಚಿವ ಸಂಪುಟದ ಖಾತೆ ಹಂಚಿಕೆ ನಡೆದಿದೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ನಿರೀಕ್ಷೆಯಂತೆ ಗೃಹ ಖಾತೆ ನೀಡಲಾಗಿದೆ. ಇದರ ಜೊತೆಗೆ ಹಣಕಾಸು, ಹೌಸಿಂಗ್, ಪವರ್ ಖಾತೆಗಳನ್ನು ನೀಡಲಾಗಿದೆ. ಇನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಆಗಸ್ಟ್ 9ಕ್ಕೆ ಏಕನಾಥ್ ಶಿಂಧೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದರು. ಶಿಂಧೆ ಹಾಗೂ ಫಡ್ನವಿಸ್ ಇಬ್ಬರೆ ಇದ್ದ ಮಹಾರಾಷ್ಟ್ರ ಸಚಿವ ಸಂಪುಟಕ್ಕೆ 18 ಮಂದಿ ಸೇರಿಕೊಂಡಿದ್ದರು. ಇದೀಗ 5 ದಿನಗಳ ಬಳಿಕ ಖಾತೆ ಹಂಚಿಕೆ ಮಾಡಲಾಗಿದೆ.

ಗ್ರಾಮೀಣ ಅಭಿವೃದ್ಧಿ ಜೊತೆಗೆ ಏಕನಾಥ್ ಶಿಂಧೆ ಸಾರಿಗೆ ಖಾತೆಯನ್ನು ನಿರ್ವಹಿಸಲಿದ್ದಾರೆ. ಬಿಜೆಪಿ ಸಚಿವ ರಾಧಾಕೃಷ್ಣ ವಿಕೆ ಪಾಟೀಲ್ ಮಹಾರಾಷ್ಟ್ರ ನೂತನ ಕಂದಾಯ ಸಚಿವರಾಗಿದ್ದಾರೆ. ಬಿಜೆಪಿಯ ಸುಧೀರ್ ಮುಗಂತಿವಾರ್ ಅರಣ್ಯ ಖಾತೆ ನೀಡಲಾಗಿದೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್‌ಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಖಾತೆ ನೀಡಲಾಗಿದೆ. ಶಿವಸೇನಾ ಬಣದ ದೀಪಕ್ ಕೇಸರ್ಕರ್ ನೂತನ ಶಿಕ್ಷಣ ಸಚಿವರಾಗಿದ್ದಾರೆ. ಇನ್ನು ಶಿಂಧೆ ಬಣದಲ್ಲಿ ಗುರುತಿಸಿಕೊಂಡ ಅಬ್ದುಲ್ ಸತಾರ್ ಕೃಷಿ ಖಾತೆ ನೀಡಲಾಗಿದೆ. 

ಸಚಿವ ಸ್ಥಾನ ಸಿಗದ ಕಾರಣಕ್ಕೆ ಸಂಜಯ್ ಶಿರ್ಸತ್ ಸಿಟ್ಟು, ಶಿವಸೇನೆ ಏಕನಾಥ್‌ ಶಿಂಧೆ ಕ್ಯಾಂಪ್‌ನಲ್ಲಿ ಬಂಡಾಯ?

ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ವಿರುದ್ಧ ಬಂಡೆದ್ದು ಏಕನಾಥ್‌ ಶಿಂಧೆ ಬಣವನ್ನು ಸೇರಿರುವ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸುಪ್ರೀಂಕೋರ್ಚ್‌ನಲ್ಲಿ ಉದ್ಧವ್‌ ಬಣ ದಾವೆ ಹೂಡಿದೆ. ಹೀಗಾಗಿ ಬಂಡಾಯ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಮುಂದೆ ಸಮಸ್ಯೆಯಾಗಬಹುದು ಎಂಬ ಉದ್ದೇಶದಿಂದ ಸಂಪುಟ ವಿಸ್ತರಣೆ ವಿಳಂಬ ಮಾಡಲಾಗುತ್ತಿತ್ತು. ಇದು ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಆ.15ರೊಳಗೆ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿತ್ತು. ಇದರಂತೆ ಆಗಸ್ಟ್ 9ಕ್ಕೆ ಸಂಪುಟ ವಿಸ್ತರಣೆ ಮಾಡಿ, ಆಗಸ್ಟ್ 14ಕ್ಕೆ ಖಾತೆ ಹಂಚಿಕೆ ಮಾಡಲಾಗಿದೆ. 

ಪಕ್ಷದ ಚಿಹ್ನೆಯ ದಾಖಲೆ ಸಲ್ಲಿಸಲು ಠಾಕ್ರೆಗೆ ಇನ್ನೂ 15 ದಿನ ಸಮಯ
ಪಕ್ಷದ ಚುನಾವಣಾ ಚಿಹ್ನೆಗಾಗಿ ಹೋರಾಟ ನಡೆಸುತ್ತಿರುವ ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ದಾಖಲೆಗಳನ್ನು ಸಲ್ಲಿಸಲು ಚುನಾವಣಾ ಆಯೋಗ ಇನ್ನೂ 15 ದಿನಗಳ ಕಾಲಾವಕಾಶ ನೀಡಿದೆ. ಪಕ್ಷದ ಚಿಹ್ನೆ ನಿಮ್ಮದೇ ಎಂದು ಸಾಬೀತುಪಡಿಸಲು ಅಗತ್ಯವಿರುವ ಶಾಸಕರ ಬೆಂಬಲದ ಪತ್ರ, ಸಾಂಸ್ಥಿಕ ಘಟಕಗಳ ಬೆಂಬಲ ಪತ್ರ, ಲಿಖಿತ ಘೋಷಣೆ ಮುಂತಾದ ದಾಖಲೆಗಳನ್ನು ಆ.23ರೊಳಗೆ ಸಲ್ಲಿಸಿ ಎಂದು ಚುನಾವಣಾ ಆಯೋಗ ಸೂಚಿಸಿದೆ.

ಮಹಾರಾಷ್ಟ್ರ ಸರ್ಕಾರದ ನಿಜವಾದ ಸಿಎಂ ಯಾರೆಂದು ಗೊತ್ತಿಲ್ಲ: 'ಇಡಿ' ಸರ್ಕಾರವನ್ನು ಲೇವಡಿ ಮಾಡಿದ ಆದಿತ್ಯ ಠಾಕ್ರೆ