ನವದೆಹಲಿ[ಮಾ.18]: 22 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲ ಲಾಲ್‌ಜಿ ಟಂಡನ್‌ ನೀಡಿದ್ದ ಸೂಚನೆಗೆ ಕಮಲ್‌ನಾಥ್‌ ನೇತೃತ್ವದ ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರ ಮತ್ತೊಮ್ಮೆ ಸಡ್ಡು ಹೊಡೆದಿದೆ. ಇದರಿಂದಾಗಿ ಮಂಗಳವಾರವೂ ವಿಶ್ವಾಸಮತ ಯಾಚನೆ ಪ್ರಕ್ರಿಯೆಯೇ ನಡೆದಿಲ್ಲ. ಈ ನಡುವೆ, ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ನಡುವೆ ಭರ್ಜರಿ ಪತ್ರ ಸಮರವೇ ನಡೆದಿದೆ.

ಏತನ್ಮಧ್ಯೆ, ತ್ವರಿತವಾಗಿ ಬಹುಮತ ಸಾಬೀತಿಗೆ ಸೂಚನೆ ನೀಡಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯ, ಬುಧವಾರ ಬೆಳಗ್ಗೆ 10.30ರೊಳಗೆ ಪ್ರತಿಕ್ರಿಯೆ ನೀಡುವಂತೆ ಕಮಲ್‌ನಾಥ್‌ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಈ ಮಧ್ಯೆ, ಬೆಂಗಳೂರಿನಲ್ಲಿರುವ ಶಾಸಕರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸುವಂತೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಘಟಕ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದೆ. ಇದೇ ವೇಳೆ, ಇನ್ನೂ 20 ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಹೇಳಿಕೆ ಕೊಟ್ಟಿದ್ದಾರೆ.

ಪತ್ರ ಸಮರ:

ಸೋಮವಾರ ಬಹುಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲರು ಶನಿವಾರ ತಡರಾತ್ರಿ ಕಮಲ್‌ನಾಥ್‌ ಅವರಿಗೆ ನಿರ್ದೇಶನ ನೀಡಿದ್ದರು. ಆದರೆ ಸೋಮವಾರ ಕೊರೋನಾ ವೈರಸ್‌ ಕಾರಣ ನೀಡಿ ಸ್ಪೀಕರ್‌ ಅವರು ಕಲಾಪವನ್ನು ಮಾ.26ರವರೆಗೆ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಪತ್ರ ಬರೆದಿದ್ದ ರಾಜ್ಯಪಾಲರು, ಮಂಗಳವಾರ ವಿಶ್ವಾಸಮತ ಸಾಬೀತುಪಡಿಸಬೇಕು. ಇಲ್ಲವಾದ ಪಕ್ಷದಲ್ಲಿ ನಿಮಗೆ ಬಹುಮತವಿಲ್ಲ ಎಂದೇ ಭಾವಿಸಬೇಕಾಗುತ್ತದೆ ಚಾಟಿ ಬೀಸಿದ್ದರು. ಈ ಪತ್ರವನ್ನು ಸ್ಪೀಕರ್‌ ಅವರಿಗೆ ರವಾನಿಸಿದ ಕಮಲ್‌ನಾಥ್‌, ರಾಜ್ಯಪಾಲರಿಗೆ ಪತ್ರ ಖಾರವಾದ ಪತ್ರವನ್ನು ಮಂಗಳವಾರ ಕಳುಹಿಸಿದರು.

ಇಡೀ ವಿಶ್ವವನ್ನು ಕೊರೋನಾ ಆವರಿಸಿದೆ. ಹೆಚ್ಚು ಜನ ಸೇರಕೂಡದು ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಹೀಗಾಗಿ ಸ್ಪೀಕರ್‌ ಅವರು ಕಲಾಪ ಮುಂದೂಡಿದ್ದಾರೆ. ಸದನದಲ್ಲಿ ಸಾಕಷ್ಟುಬಾರಿ ಬಹುಮತ ಸಾಬೀತುಪಡಿಸಿದ್ದೇನೆ. ಇದೀಗ ವಿಶ್ವಾಸಮತ ಸಾಬೀತುಪಡಿಸದಿದ್ದರೆ ಬಹುಮತ ಕಳೆದುಕೊಂಡಂತೆಯೇ ಎಂದು ತಾವು ಹೇಳಿರುವುದು ಅಸಂವಿಧಾನಿಕ. ಅದಕ್ಕೆ ಯಾವುದೇ ಆಧಾರವಿಲ್ಲ ಎಂದು ತಿಳಿಸಿದ್ದಾರೆ.