ಭೋಪಾಲ್[ಮಾ.10]: ಮಧ್ಯಪ್ರದೇಶ ಕಾಂಗ್ರೆಸ್‌ಗೆ ಮತ್ತೊಂದು ಶಾಕಿಂಗ್ ಸುದ್ದಿ ಬಂದೆರಗಿದೆ. 20 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ಗುಡ್‌ ಬೈ ಎಂದಿದ್ದಾರೆ. ಈ ಮೂಲಕ ಸರ್ಕಾರ ಪತನವಾಗುವ ಲಕ್ಷಣಗಳು ಮತ್ತಷ್ಟು ದಟ್ಟವಾಗಿವೆ.

ಹೌದು ಪಿಎಂ ಮೋದಿ ಹಾಗೂ ಅಮಿತ್ ಶಾ ಭೇಟಿಯಾದ ಸಿಂಧಿಯಾ ಬಿಜೆಪಿಗೆ ಸೇರುತ್ತಾರೆಂಬ ಮಾತುಗಹಳು ಜೋರಾಗಿದ್ದವು. ಆದರೀಗ ಭೇಟಿ ಬೆನ್ನಲ್ಲೇ ಸಿಂಧಿಯಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಎಲ್ಲಾ ಸುದ್ದಿಗಳಿಗಾಘಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಸೇರ್ತಾರಾ ಸಿಂಧಿಯಾ?

ಇನ್ನು ರಾಜೀನಾಮೆ ನೀಡಿರುವ ಸಿಂಧಿಯಾ ಬಿಜೆಪಿ ಸೇರುತ್ತಾರೆಂಬ ಮಾತುಗಳು ಜೋರಾಗಿವೆ. ಬಿಜೆಪಿ ಮೂಲಗಳಿಂದ ಬಂದ ಮಾಹಿತಿ ಅನ್ವಯ ಪಕ್ಷವು ಜ್ಯೋತಿರಾದಿತ್ಯ ಸಿಂಧಿಯಾರನ್ನು ರಾಜ್ಯಸಭೆಗೆ ಕಳುಹಿಸಿ ಮೋದಿ ಸಂಪುಟದ ಸಚಿವರನ್ನಾಗಿಸುವ ತಯಾರಿಯಲ್ಲಿದೆ ಎನ್ನಲಾಗಿದೆ. ಇಲ್ಲದಿದ್ದರೆ ಮಧ್ಯಪ್ರದೇಶ ಸರ್ಕಾರ ಪತನಗೊಂಡರೆ, ಮುಂದೆ ಅಸ್ತಿತ್ವಕ್ಕೆ ಬರಲಿರುವ ಸರ್ಕಾರದಲ್ಲಿ ಸಿಂಧಿಯಾ ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗಿದೆ. 

ಸಿಂಧಿಯಾ ಬಂಡಾಯ:

ಮಾ.26ಕ್ಕೆ ನಡೆಯಲಿರುವ ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚಿಸಲು ಕಮಲ್‌ನಾಥ್‌ ಸೋಮವಾರ ದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಆದರೆ ಇದೇ ವೇಳೆ ದಿಲ್ಲಿಯಲ್ಲೇ ಇದ್ದ ಸಿಂಧಿಯಾ ಭೇಟಿಗೆ ಸೋನಿಯಾ ನಿರಾಕರಿಸಿದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಸಿಂಧಿಯಾ ನಿಷ್ಠ ಶಾಸಕರು ಮಧ್ಯಪ್ರದೇಶ ತೊರೆದು ಬೆಂಗಳೂರು ಸೇರಿಕೊಂಡಿದ್ದಾರೆ.

ಈ ವಿದ್ಯಮಾನದ ಕಾರಣ ದಿಲ್ಲಿ ಪ್ರವಾಸ ಮೊಟಕುಗೊಳಿಸಿದ ಕಮಲ್‌ನಾಥ್‌, ಭೋಪಾಲ್‌ಗೆ ಆಗಮಿಸಿ ಮುಖಂಡ ದಿಗ್ವಿಜಯ ಸಿಂಗ್‌ ಹಾಗೂ ಕಾಂಗ್ರೆಸ್‌ ಶಾಸಕರ ಜತೆ ಸಭೆ ನಡೆಸಿದ್ದಾರೆ. ರಾತ್ರಿಯೇ ತುರ್ತು ಸಂಪುಟ ಸಭೆ ನಡೆಸಿ ತಮ್ಮ ನಿಷ್ಠ ಸಚಿವರ ರಾಜೀನಾಮೆ ಪಡೆದಿದ್ದಾರೆ.

ಮತ್ತೊಂದೆಡೆ ಪರಿಸ್ಥಿತಿಯ ಬಗ್ಗೆ ಶಿವರಾಜ್‌ಸಿಂಗ್‌ ಚೌಹಾಣ್‌ ಅವರು ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಸೋಮವಾರ ಸಂಜೆ ಸಮಾಲೋಚಿಸಿದ್ದಾರೆ. ನಾಥ್‌ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲೂಬಹುದು ಎನ್ನಲಾಗಿದೆ. ಈ ಬಗ್ಗೆ ಚರ್ಚಿಸಲು ಮಂಗಳವಾರ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ.

ಮಧ್ಯಪ್ರದೇಶ ಹೈಡ್ರಾಮಾ: ಬಂಡೆದ್ದ ಸಿಂಧಿಯಾ, 22 ಸಚಿವರ ರಾಜೀನಾಮೆ!

ಕಮಲ್‌-ಸಿಂಧಿಯಾ ಸಮರ:

ಸಿಂಧಿಯಾ ಅವರು ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿದ್ದಾರೆ. ಈಗ ಈ ಹುದ್ದೆ ಕಮಲ್‌ನಾಥ್‌ ಬಳಿಯೇ ಇದೆ. ಈ ಕಾರಣಕ್ಕೆ ಇಬ್ಬರ ನಡುವೆಯೂ ಜಟಾಪಟಿ ನಡೆದೇ ಇದೆ. ‘ಕಮಲ್‌ನಾಥ್‌ ಸರ್ಕಾರ ಪ್ರಣಾಳಿಕೆ ಭರವಸೆ ಈಡೇರಿಸದಿದ್ದರೆ ಬೀದಿಗಿಳಿಯುವೆ’ ಎಂದು ಸಿಂಧಿಯಾ ಇತ್ತೀಚೆಗೆ ಗುಡುಗಿದ್ದರು. ‘ಬೀದಿಗಿಳಿಯಲಿ ಬಿಡಿ’ ಎಂದು ಕಮಲ್‌ನಾಥ್‌ ಕೂಡ ತಿರುಗೇಟು ನೀಡಿದ್ದರು.

ಬಲಾಬಲ ಲೆಕ್ಕಾಚಾರ:

ಮಧ್ಯಪ್ರದೇಶ ವಿಧಾನಸಭೆ 230 ಶಾಸಕರನ್ನು ಹೊಂದಿದ್ದು, ಶಾಸಕರಿಬ್ಬರ ನಿಧನದ ಕಾರಣ ಈಗ 2 ಸ್ಥಾನ ಖಾಲಿ ಇವೆ. ಹೀಗಾಗಿ ಬಲ 228ಕ್ಕೆ ಕುಸಿದಿದ್ದು, ಬಹುಮತಕ್ಕೆ 115 ಸ್ಥಾನ ಬೇಕು. ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ಈಗ 121 ಸ್ಥಾನ ಹೊಂದಿವೆ. ಈಗ ಬಂಡಾಯ 18 ಶಾಸಕರು ರಾಜೀನಾಮೆ ನೀಡಿದರೆ, ಅದರ ಬಲ 102ಕ್ಕೆ ಇಳಿಯಲಿದೆ. ಆಗ ಸದನದ ಬಲವೂ 210ಕ್ಕೆ ಇಳಿಯಲಿದೆ. ಈ ಸಂದರ್ಭದಲ್ಲಿ ಬಹುಮತಕ್ಕೆ 106 ಸ್ಥಾನ ಸಾಕಾಗುತ್ತದೆ. 107 ಸದಸ್ಯರ ಹೊಂದಿರುವ ಬಿಜೆಪಿ ಅಧಿಕಾರಕ್ಕೆ ಬರಲಿದೆ.