ಭೋಪಾಲ್‌/ಬೆಂಗಳೂರು[ಮಾ.10]: ಮಧ್ಯಪ್ರದೇಶದ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತ್ತೊಮ್ಮೆ ಬಂಡಾಯದ ಬೇಗುದಿಗೆ ಸಿಲುಕಿದ್ದು, ಸೋಮವಾರ ಭಾರಿ ಹೈಡ್ರಾಮಾ ನಡೆದಿದೆ. ಮುನಿಸಿಕೊಂಡಿರುವ 6 ಸಚಿವರು ಸೇರಿದಂತೆ 18 ಶಾಸಕರು ಬೆಂಗಳೂರಿನ ಸ್ಟಾರ್‌ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಇವರೆಲ್ಲರೂ ಕಮಲ್‌ನಾಥ್‌ ಅವರ ಜತೆ ಎಣ್ಣೆ- ಸೀಗೆಕಾಯಿ ಸಂಬಂಧ ಹೊಂದಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿಷ್ಠರು.

ಈ ಬಂಡಾಯದ ಬೆನ್ನಲ್ಲೇ ಕಮಲ್‌ನಾಥ್‌ ‘ಡ್ಯಾಮೇಜ್‌ ಕಂಟ್ರೋಲ್‌’ಗೆ ಮುಂದಾಗಿದ್ದಾರೆ. ಭೋಪಾಲ್‌ನಲ್ಲಿ ಸೋಮವಾರ ರಾತ್ರಿ ತುರ್ತು ಸಚಿವ ಸಂಪುಟ ಸಭೆ ನಡೆಸಿ, ಒಟ್ಟು 29 ಸಚಿವರ ಪೈಕಿ ಸಭೆಯಲ್ಲಿ ಹಾಜರಿದ್ದ ತಮ್ಮ ನಿಷ್ಠರಾದ 22 ಸಚಿವರ ರಾಜೀನಾಮೆ ಪಡೆದಿದ್ದಾರೆ. ಸಂಪುಟ ಪುನಾರಚಿಸಲು ಅವರು ನಿರ್ಧರಿಸಿದ್ದು, ಅತೃಪ್ತ ಶಾಸಕರ ತಣಿಸಿ ಸರ್ಕಾರ ರಕ್ಷಿಸುವ ಯತ್ನಕ್ಕೆ ಕೈಹಾಕಿದ್ದಾರೆ.

ಸಿಂಧಿಯಾ ಅವರು ಬಿಜೆಪಿ ಕಡೆ ವಾಲುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಅವರು ಬಿಜೆಪಿ ಪಾಳಯಕ್ಕೆ ಜಿಗಿದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂಬ ವಿಶ್ಲೇಷಣೆ ಇದೆ. ಅಂತಹ ಸಂದರ್ಭದಲ್ಲಿ ಸಿಂಧಿಯಾರನ್ನು ಕೇಂದ್ರ ಸಚಿವರನ್ನಾಗಿ ಮಾಡಿ, ಶಿವರಾಜ ಸಿಂಗ್‌ ಚೌಹಾಣ್‌ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಲೆಕ್ಕಾಚಾರವಿದೆ. ಈ ನಡುವೆ, ಸಿಂಧಿಯಾ ಹಾಗೂ ನಿಷ್ಠ ಶಾಸಕರು ಕಮಲ್‌ರ ಮನವೊಲಿಕೆ ತಂತ್ರಕ್ಕೆ ಬಗ್ಗುತ್ತಾರಾ ಅಥವಾ ಬಿಜೆಪಿ ಆಫರ್‌ ಒಪ್ಪಿ ಆ ಪಕ್ಷ ಸೇರುತ್ತಾರಾ ಎಂಬ ಬಗ್ಗೆ ಕುತೂಹಲವಿದೆ.

ಸಿಂಧಿಯಾ ಬಂಡಾಯ:

ಮಾ.26ಕ್ಕೆ ನಡೆಯಲಿರುವ ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚಿಸಲು ಕಮಲ್‌ನಾಥ್‌ ಸೋಮವಾರ ದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಆದರೆ ಇದೇ ವೇಳೆ ದಿಲ್ಲಿಯಲ್ಲೇ ಇದ್ದ ಸಿಂಧಿಯಾ ಭೇಟಿಗೆ ಸೋನಿಯಾ ನಿರಾಕರಿಸಿದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಸಿಂಧಿಯಾ ನಿಷ್ಠ ಶಾಸಕರು ಮಧ್ಯಪ್ರದೇಶ ತೊರೆದು ಬೆಂಗಳೂರು ಸೇರಿಕೊಂಡಿದ್ದಾರೆ.

ಈ ವಿದ್ಯಮಾನದ ಕಾರಣ ದಿಲ್ಲಿ ಪ್ರವಾಸ ಮೊಟಕುಗೊಳಿಸಿದ ಕಮಲ್‌ನಾಥ್‌, ಭೋಪಾಲ್‌ಗೆ ಆಗಮಿಸಿ ಮುಖಂಡ ದಿಗ್ವಿಜಯ ಸಿಂಗ್‌ ಹಾಗೂ ಕಾಂಗ್ರೆಸ್‌ ಶಾಸಕರ ಜತೆ ಸಭೆ ನಡೆಸಿದ್ದಾರೆ. ರಾತ್ರಿಯೇ ತುರ್ತು ಸಂಪುಟ ಸಭೆ ನಡೆಸಿ ತಮ್ಮ ನಿಷ್ಠ ಸಚಿವರ ರಾಜೀನಾಮೆ ಪಡೆದಿದ್ದಾರೆ.

ಮತ್ತೊಂದೆಡೆ ಪರಿಸ್ಥಿತಿಯ ಬಗ್ಗೆ ಶಿವರಾಜ್‌ಸಿಂಗ್‌ ಚೌಹಾಣ್‌ ಅವರು ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಸೋಮವಾರ ಸಂಜೆ ಸಮಾಲೋಚಿಸಿದ್ದಾರೆ. ನಾಥ್‌ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲೂಬಹುದು ಎನ್ನಲಾಗಿದೆ. ಈ ಬಗ್ಗೆ ಚರ್ಚಿಸಲು ಮಂಗಳವಾರ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ.

ಕಮಲ್‌-ಸಿಂಧಿಯಾ ಸಮರ:

ಸಿಂಧಿಯಾ ಅವರು ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿದ್ದಾರೆ. ಈಗ ಈ ಹುದ್ದೆ ಕಮಲ್‌ನಾಥ್‌ ಬಳಿಯೇ ಇದೆ. ಈ ಕಾರಣಕ್ಕೆ ಇಬ್ಬರ ನಡುವೆಯೂ ಜಟಾಪಟಿ ನಡೆದೇ ಇದೆ. ‘ಕಮಲ್‌ನಾಥ್‌ ಸರ್ಕಾರ ಪ್ರಣಾಳಿಕೆ ಭರವಸೆ ಈಡೇರಿಸದಿದ್ದರೆ ಬೀದಿಗಿಳಿಯುವೆ’ ಎಂದು ಸಿಂಧಿಯಾ ಇತ್ತೀಚೆಗೆ ಗುಡುಗಿದ್ದರು. ‘ಬೀದಿಗಿಳಿಯಲಿ ಬಿಡಿ’ ಎಂದು ಕಮಲ್‌ನಾಥ್‌ ಕೂಡ ತಿರುಗೇಟು ನೀಡಿದ್ದರು.

ಬಲಾಬಲ ಲೆಕ್ಕಾಚಾರ:

ಮಧ್ಯಪ್ರದೇಶ ವಿಧಾನಸಭೆ 230 ಶಾಸಕರನ್ನು ಹೊಂದಿದ್ದು, ಶಾಸಕರಿಬ್ಬರ ನಿಧನದ ಕಾರಣ ಈಗ 2 ಸ್ಥಾನ ಖಾಲಿ ಇವೆ. ಹೀಗಾಗಿ ಬಲ 228ಕ್ಕೆ ಕುಸಿದಿದ್ದು, ಬಹುಮತಕ್ಕೆ 115 ಸ್ಥಾನ ಬೇಕು. ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ಈಗ 121 ಸ್ಥಾನ ಹೊಂದಿವೆ. ಈಗ ಬಂಡಾಯ 18 ಶಾಸಕರು ರಾಜೀನಾಮೆ ನೀಡಿದರೆ, ಅದರ ಬಲ 102ಕ್ಕೆ ಇಳಿಯಲಿದೆ. ಆಗ ಸದನದ ಬಲವೂ 210ಕ್ಕೆ ಇಳಿಯಲಿದೆ. ಈ ಸಂದರ್ಭದಲ್ಲಿ ಬಹುಮತಕ್ಕೆ 106 ಸ್ಥಾನ ಸಾಕಾಗುತ್ತದೆ. 107 ಸದಸ್ಯರ ಹೊಂದಿರುವ ಬಿಜೆಪಿ ಅಧಿಕಾರಕ್ಕೆ ಬರಲಿದೆ.