ನವದೆಹಲಿ[ಮಾ.10]: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಪಿಎಂ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಲ್ಲದೇ ಮಧ್ಯಪ್ರದೇಶ ಕಾಂಗ್ರೆಸ್ ನ 20 ಸಚಿವರು ಕೂಡಾ ರಾಜೀನಾಮೆ ನೀಡಲು ತಯಾರಾಗಿದ್ದಾರೆ. 

ಹೌದು ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಮುಖ್ಯಮಂತ್ರಿ ಕಮಲನಾಥ್ ಸಂಕಷ್ಟದಲ್ಲಿದ್ದಾರೆ. ಈಗಾಗಲೇ 20 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಸೋಮವಾರದಂದು ಸಿಎಂ ಕರೆದಿದ್ದ ಸಭೆಗೂ 8 ಮಂದಿ ಗೈರಾಗಿದ್ದರು. ಇನ್ನು ಇತ್ತ ಸಿಂಧಿಯಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲ ಸಚಿವರು ಈಗಾಗಲೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.  ಹೀಗಿರುವಾಗ ಸರ್ಕಾರ ಉರುಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಈ ನಡುವೆ ಸಿಎಂ ಕಮಲನಾಥ್ ಮಾಫಿಯಾ ಸಹಾಯದಿಂದ ಸರ್ಕಾರ ಉರುಳಿಸುವ ಯತ್ನ ನಡೆಯುತ್ತಿದೆ. ನಾವು ಇದನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದಿದ್ದಾರೆ.

ಇನ್ನು ಸುದ್ದಿಸಂಸ್ಥೆ ANI ನೀಡಿರುವ ಮಾಹಿತಿ ಅನ್ವಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ತಡರಾತ್ರಿ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಜೊತೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡಾ ಭಾಗವಹಿಸಿದ್ದರು. ಇನ್ನು ಬಿಜೆಪಿ ಮೂಲಗಳಿಂದ ಬಂದ ಮಾಹಿತಿ ಅನ್ವಯ ಪಕ್ಷವು ಜ್ಯೋತಿರಾದಿತ್ಯ ಸಿಂಧಿಯಾರನ್ನು ರಾಜ್ಯಸಭೆಗೆ ಕಳುಹಿಸುವ ತಯಾರಿಯಲ್ಲಿದೆ ಎನ್ನಲಾಗಿದೆ. ಇನ್ನು ಸರ್ಕಾರ ಬಿದ್ದರೆ, ಅಸ್ತಿತ್ವಕ್ಕೆ ಬರಲಿರುವ ಸರ್ಕಾರದಲ್ಲಿ ಸಿಂಧಿಯಾ ುಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗಿದೆ.