ನವದೆಹಲಿ[ಮಾ.17]: ಮಧ್ಯಪ್ರದೇಶದಲ್ಲಿ ಸೋಮವಾರ ನಾಟಕೀಯ ವಿದ್ಯಮಾನ ನಡೆದಿದೆ. ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ‘ಕೊರೋನಾ ವೈರಸ್‌’ ಸಬೂಬು ಹೇಳಿದ ಕಾರಣ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯದೆ, ವಿಧಾನಸಭೆ ಕಲಾಪವನ್ನು ಮಾಚ್‌ರ್‍ 26ಕ್ಕೆ ಮುಂದೂಡಲಾಗಿದೆ.

ಆದರೆ, ಇದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಅವರು ರಾಜ್ಯಪಾಲರಿಗೆ ಹಾಗೂ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಚೌಹಾಣ್‌ ಅವರ ಅರ್ಜಿ ಮನ್ನಿಸಿರುವ ರಾಜ್ಯಪಾಲ ಲಾಲ್‌ಜಿ ಟಂಡನ್‌, ಮಂಗಳವಾರವೇ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಕಮಲ್‌ನಾಥ್‌ಗೆ ಸೂಚಿಸಿದ್ದಾರೆ. ಇನ್ನೊಂದೆಡೆ, ಚೌಹಾಣ್‌ ಅರ್ಜಿಯನ್ನು ಮಂಗಳವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. ಹೀಗಾಗಿ ಮಂಗಳವಾರದ ವಿದ್ಯಮಾನಗಳು ಕಮಲ್‌ನಾಥ್‌ ಸರ್ಕಾರಕ್ಕೆ ನಿರ್ಣಾಯಕವಾಗುವ ಸಾಧ್ಯತೆ ಇದೆ.

ನಡೆಯದ ವಿಶ್ವಾಸಮತ:

ಬಜೆಟ್‌ ಅಧಿವೇಶನ ಆರಂಭ ಆಗುತ್ತಿದ್ದಂತೆಯೇ ರಾಜ್ಯಪಾಲ ಲಾಲ್‌ಜಿ ಟಂಡನ್‌ ಅವರು ಸರ್ಕಾರದ ಭಾಷಣವನ್ನು ವಿಧಾನಸಭೆಯಲ್ಲಿ ಕೇವಲ 1 ನಿಮಿಷದಲ್ಲಿ ಸಾಂಕೇತಿಕವಾಗಿ ಓದಿ ಭಾಷಣದ ‘ಶಾಸ್ತ್ರ’ ಮುಗಿಸಿದರು. ಬಳಿಕ ಅವರ ಭಾನುವಾರ ಅವರು ನೀಡಿದ್ದ ಆಜ್ಞೆಯ ಅನುಸಾರ ವಿಶ್ವಾಸಮತ ಪ್ರಕ್ರಿಯೆ ಆರಂಭವಾಗಬೇಕಿತ್ತು.

ಆದರೆ ಸಂಸದೀಯ ಸಚಿವ ಗೋವಿಂದ ಸಿಂಗ್‌ ಅವರು ಮಧ್ಯಪ್ರವೇಶಿಸಿ, ‘ಕೊರೋನಾ ವೈರಸ್‌ ವ್ಯಾಪಿಸುತ್ತಿರುವ ಕಾರಣ ಕೆಲವು ರಾಜ್ಯಗಳ ವಿಧಾನಸಭೆ ಅಧಿವೇಶನ ಮುಂದೂಡಲಾಗಿದೆ. ವೈರಾಣುವನ್ನು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಮಧ್ಯಪ್ರದೇಶ ವಿಧಾನಸಭೆ ಕಲಾಪವನ್ನೂ ಮುಂದೂಡಬೇಕು’ ಎಂದು ಕೋರಿದರು. ಈ ವೇಳೆ ಅನೇಕ ಶಾಸಕರು ವೈರಾಣು ಭೀತಿಯಿಂದ ಮಾಸ್ಕ್‌ ಧರಿಸಿ ಆಸೀನರಾಗಿದ್ದು ಕಂಡುಬಂತು.

ಆಗ ಬಿಜೆಪಿ ಸದಸ್ಯರು ಸಚಿವರ ಕೋರಿಕೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಈ ನಡುವೆ, ಸ್ಪೀಕರ್‌ ಎನ್‌.ಪಿ. ಪ್ರಜಾಪತಿ ಅವರು ರಾಜ್ಯಪಾಲರನ್ನು ಈ ಬಗ್ಗೆ ಸಂಪರ್ಕಿಸಿದಾಗ, ‘ಪ್ರಜಾಸತ್ತೆಯ ಮೌಲ್ಯ ಎತ್ತಿಹಿಡಿಯಿರಿ’ ಎಂಬ ಗೂಢಾರ್ಥದ ಸಲಹೆ ನೀಡಿದರು ಎಂದು ವರದಿಯಾಗಿದೆ. ಬಳಿಕ ಗದ್ದಲದ ವಾತಾವರಣದಲ್ಲೇ ಪ್ರಜಾಪತಿ ಅವರು, ಸರ್ಕಾರದ ಕೋರಿಕೆ ಮನ್ನಿಸಿ ಮಾಚ್‌ರ್‍ 26ರವರೆಗೆ ಸದನ ಮುಂದೂಡಿದರು.

ಇದರ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿದ ಶಿವರಾಜ ಸಿಂಗ್‌ ಚೌಹಾಣ್‌, ಕೂಡಲೇ ವಿಶ್ವಾಸಮತ ಪ್ರಕ್ರಿಯೆ ನಡೆಸಲು ಸೂಚಿಸಿ ಎಂದು ಕೋರಿದರು. ‘ಕೊರೋನಾ ವೈರಸ್‌ ಕೂಡ ಸರ್ಕಾರವನ್ನು ಕಾಪಾಡದು’ ಎಂದು ಕುಟುಕಿದರು.

ಆದರೆ ಇದಕ್ಕೆ ತಿರುಗೇಟು ನೀಡಿರುವ ಕಮಲ್‌ನಾಥ್‌, ‘ಗೆಲ್ಲುವ ವಿಶ್ವಾಸವಿದ್ದರೆ ಬಿಜೆಪಿಯವರು ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿ’ ಎಂದು ಸವಾಲು ಹಾಕಿದರು.

ರಾಜ್ಯಪಾಲರಿಗೂ ಪತ್ರ ಬರೆದ ಕಮಲ್‌, ‘ಕರ್ನಾಟಕದಲ್ಲಿ ಪೊಲೀಸರ ಸಹಾಯದೊಂದಿಗೆ ನಮ್ಮ ಶಾಸಕರನ್ನು ಬಿಜೆಪಿ ಬಲವಂತವಾಗಿ ಕೂಡಿಹಾಕಿದೆ. ಹೀಗಾಗಿ ವಿಶ್ವಾಸಮತ ಯಾಚನೆ ಅಸಾಂವಿಧಾನಿಕವಾಗುತ್ತದೆ’ ಎಂದು ದೂರಿದ್ದಾರೆ.

ಸುಪ್ರೀಂಗೆ ಚೌಹಾಣ್‌- ಕರ್ನಾಟಕದ ಉದಾಹರಣೆ:

ಈ ನಡುವೆ, ಸುಪ್ರೀಂ ಕೋರ್ಟ್‌ ಮೊರೆ ಹೋದ ಚೌಹಾಣ್‌, ‘ಕಮಲ್‌ನಾಥ್‌ ಅವರು ರಾಜ್ಯಪಾಲರ ಸೂಚನೆಯನ್ನೂ ಧಿಕ್ಕರಿಸಿ ಸೋಮವಾರ ವಿಶ್ವಾಸಮತ ಯಾಚಿಸಿಲ್ಲ. 12 ತಾಸಿನೊಳಗೆ ಬಹುಮತ ಕೋರುವಂತೆ ನಾಥ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಬೇಕು’ ಎಂದು ಚೌಹಾಣ್‌ ಅರ್ಜಿ ಸಲ್ಲಿಸಿದ್ದಾರೆ.

ಅಲ್ಲದೆ, ಇತ್ತೀಚಿನ ಕರ್ನಾಟಕ ವಿದ್ಯಮಾನವನ್ನು ಅರ್ಜಿಯಲ್ಲಿ ಉದಾಹರಿಸಿದ ಅವರು, ‘ಕರ್ನಾಟಕದಲ್ಲಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಬಂಡೆದ್ದಿದ್ದ 15 ಶಾಸಕರು ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲೇಬೇಕು ಎಂದೇನಿಲ್ಲ ಎಂದು ಸುಪ್ರೀಂ ಕೋರ್ಟೇ ಹೇಳಿತ್ತು. ಹೀಗಾಗಿ ಮಧ್ಯಪ್ರದೇಶದ ಬಂಡಾಯ ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಬಲವಂತಪಡಿಸುವುದು ಕಾನೂನುಬಾಹಿರ’ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ. ಮಂಗಳವಾರ ಇದರ ವಿಚಾರಣೆ ನಡೆಯಲಿದೆ.

ಟಿಂಟ್‌- ಕಮಲ ವರ್ಸಸ್‌ ಕಮಲ್‌

- ರಾಜ್ಯಪಾಲರ ಭಾಷಣ ಬಳಿಕ ವಿಶ್ವಾಸಮತ ಪ್ರಕ್ರಿಯೆ ನಡೆಯಬೇಕಿತ್ತು

- ಆದರೆ ಕೊರೋನಾ ಕಾರಣ ಕಲಾಪ ಮುಂದೂಡಲು ಕಾಂಗ್ರೆಸ್‌ ಬೇಡಿಕೆ

- ಬಿಜೆಪಿಯಿಂದ ತೀವ್ರ ವಿರೋಧ. ರಾಜ್ಯಪಾಲರನ್ನು ಸಂಪರ್ಕಿಸಿದ ಸ್ಪೀಕರ್‌

- ಪ್ರಜಾಸತ್ತೆ ಮೌಲ್ಯ ಎತ್ತಿ ಹಿಡಿಯಿರಿ: ಗೌರ್ನರ್‌ರಿಂದ ನಿಗೂಢ ಸಂದೇಶ

- ಕಲಾಪ ಮುಂದೂಡಿದ ಸ್ಪೀಕರ್‌. ರಾಜ್ಯಪಾಲರಿಗೆ, ಸುಪ್ರೀಂಗೆ ಬಿಜೆಪಿ ಮೊರೆ

- ಇಂದು ಮತ್ತೆ ವಿಶ್ವಾಸಮತ ಸಾಬೀತಿಗೆ ಗೌರ್ನರ್‌ ಸೂಚನೆ