ಚುನಾವಣೆ ಬೆನ್ನಲ್ಲೇ ಬಿಜೆಪಿಗೆ ಶಾಕ್, ಪಕ್ಷ ತೊರೆದ ಪ್ರಮುಖ ನಾಯಕ!
ಚುನಾವಣೆ ಸಮೀಪಿಸುತ್ತಿದೆ. ತಯಾರಿಗಳು ಜೋರಾಗುತ್ತಿದೆ. ಇದರ ನಡುವೆ ಕೆಲ ಪಕ್ಷಾಂತರ ಚಟುವಟಿಕೆಗಳು ಚುರುಕುಗೊಂಡಿದೆ. ಇದೀಗ ಬಿಜೆಪಿ ಮತ್ತೊಂದು ಶಾಕ್ ಎದುರಾಗಿದೆ. ಪಕ್ಷದ ಪ್ರಮುಖ ನಾಯಕ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ

ಇಂದೋರ್(ಸೆ.20) ಒಂದೆಡೆ ಲೋಕಸಭಾ ಚುನಾವಣೆ, ಮತ್ತೊಂದೆಡೆ ವಿಧಾನಸಭಾ ಚುನಾವಣೆ. ಹೀಗಾಗಿ ಚುನಾವಣೆ ಗೆಲ್ಲಲು ತಯಾರಿಗಳು ಭರ್ಜರಿಯಾಗಿದೆ. ಇದರ ನಡುವೆ ಬಿಜೆಪಿಗೆ ಆಘಾತ ಎದುರಾಗಿದೆ. ಮಧ್ಯಪ್ರದೇಶ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಪ್ರಮುಖ ನಾಯಕ ಬಿಜೆಪಿ ತೊರೆದಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಆಪ್ತ ಪ್ರಮೋದ್ ಟಂಡನ್ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. 2020ರಲ್ಲಿ ಸಿಂಧಿಯಾ ಬಿಜೆಪಿ ಸೇರಿಕೊಂಡ ಬೆನ್ನಲ್ಲೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸಿದ್ದ ಪ್ರಮೋದ್ ಟಂಡನ್ ಇದೀಗ ಪಕ್ಷ ತೊರೆದು ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ.
ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತಕ್ಕೂ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಮೋದ್ ಟಂಡನ್ ಪ್ರಮುಖವಾಗಿ ಬಿಜೆಪಿ ನಾಯಕರ ಧೋರಣೆ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ನಡೆ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಾಧರಾವ್ ಸಿಂಧಿಯಾ ಜೊತೆ ಕೆಲಸ ಮಾಡಿದ್ದೇನೆ. ಹೀಗಾಗಿ ಜ್ಯೋತಿರಾಧಿತ್ಯ ಸಿಂಧಿಯಾ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದೆ. ಆದರೆ ಬಿಜೆಪಿಯಲ್ಲಿ ನನ್ನನ್ನು ನಡೆಸಿಕೊಂಡ ರೀತಿಗೆ ಬೇಸರವಾಗಿದೆ. ರಾಜಕೀವಾಗಿ ಮುಗಿಸುವ ತಂತ್ರ ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
'ಸನಾತನ ಧರ್ಮವನ್ನೇ ಅವರು ತುಂಡು ಮಾಡಲು ಬಯಸಿದ್ದಾರೆ..' ಇಂಡಿ ಒಕ್ಕೂಟದ ವಿರುದ್ಧ ಮೋದಿ ವಾಗ್ದಾಳಿ
ಪ್ರಮೋದ್ ಟಂಡನ್ ಜೊತೆ ಮತ್ತೋರ್ವ ಬಿಜೆಪಿ ನಾಯಕ ದಿನೇಶ್ ಮಲ್ಹರ್ ಕೂಡ ಪಕ್ಷ ತೊರೆದಿದ್ದಾರೆ. ಇಬ್ಬರು ನಾಯಕರು ಕಮಲನಾಥ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬಿಜೆಪಿ ತೊರೆಯುವ ನಾಯಕರ ಸಂಖ್ಯೆ ಹೆಚ್ಚಿದೆ. ಪ್ರಮುಖವಾಗಿ ಸಿಂಧಿಯಾ ಬಿಜೆಪಿಗೆ ಆಗಮಿಸಿದ ಬಳಿಕ ಮೂಲ ಬಿಜೆಪಿಗರು ಮುನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಸಿಂಧಿಯಾ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರು ಕೂಡ ಮುನಿಸಿಕೊಂಡಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ತಮ್ಮದೇ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಪಕ್ಷಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದರು.ರಾಜೀನಾಮೆ ಘೋಷಣೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದರುವ ಶಾಸಕ ವೀರೇಂದ್ರ ರಘುವಂಶಿ,‘ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧಿಕಾರದಲ್ಲಿ ನಮಗೆ ನೋವಾಗಿದೆ. ನಮ್ಮ ಕ್ಷೇತ್ರಕ್ಕೆ ಭ್ರಷ್ಟಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಮ್ಮ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಉಂಟು ಮಾಡಲಾಗಿದೆ. ಇದನ್ನು ಹಲವು ಬಾರಿ ಮನದಟ್ಟು ಮಾಡಿದರು, ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಕಿಡಿಕಾರಿದ್ದಾರೆ.
ಚುನಾವಣೆ ಬೆನ್ನಲ್ಲೇ ಬಿಜೆಪಿಗೆ ಶಾಕ್, ಪಕ್ಷಕ್ಕೆ ರಾಜೀನಾಮೆ ನೀಡಿದ ಕೋಲಾರಸ್ ಶಾಸಕ!
ಇದೇ ವೇಳೆ, ‘ನಾವು 2014-19ರ ಚುನಾವಣೆಯಲ್ಲಿ ಪಕ್ಷದ ಪರ ಪೂರ್ಣ ಶ್ರಮದಿಂದ ಕೆಲಸ ಮಾಡಿದರೂ, ಯಾವುದೇ ಮರ್ಯಾದೆ ನೀಡುತ್ತಿಲ್ಲ. ಹೊಸಬರಿಗೆ ಮಣೆ ಹಾಕಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ. ಈ ಮೂಲಕ ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.