ಮುಂಬೈ(ಡಿ.06): 2019ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, ಈಗಾಗಲೇ ವಿವಿಧ ಕ್ಷೇತ್ರಗಳ ಹಲವು ಸೆಲಿಬ್ರಿಟಿಗಳಿಗೆ ಗಾಳ ಹಾಕಿದೆ. ಅವರಲ್ಲಿ ಯಾರು ಪಕ್ಷಕ್ಕೆ ಬರುತ್ತಾರೆ, ಯಾರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದು ಇದೀಗ ತೀವ್ರ ಕುತೂಹಲ ಮೂಡಿಸಿದೆ.

ಅದರಂತೆ ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಈಗಾಗಲೇ ಹಳತಾಗಿದ್ದು, ಮಾಧುರಿ 2019ರ ಲೋಕಸಭೆ ಚುನಾವಣೆಯಲ್ಲಿ ಪುಣೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

ಹೌದು, ಪುಣೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿದ್ದು, ಪಕ್ಷದ ಮಹಾರಾಷ್ಟ್ರ ರಾಜ್ಯ ಘಟಕ ಸಿದ್ಧಪಡಿಸಿರುವ ಅಭ್ಯರ್ಥಿ ಪಟ್ಟಿಯಲ್ಲಿ ಮಾಧುರಿ ದೀಕ್ಷಿತ್ ಹೆಸರೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಹಿಂದೆಯೇ ಮಾಧುರಿ ದೀಕ್ಷಿತ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡಿದ್ದ ಮಾಧುರಿ, ಬಿಜೆಪಿ ಪಕ್ಷ ಸೇರುವ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು ಎನ್ನಲಾಗಿತ್ತು.