ಬಿಜೆಪಿಗೆ ತಪ್ಪದ ಮಾಡಾಳ್ ಕಿರಿಕಿರಿ: ಚನ್ನಗಿರಿಯಲ್ಲಿ ಅರ್ಧಕ್ಕೆ ಮೊಟಕುಗೊಂಡ ವಿಜಯ ಸಂಕಲ್ಪ ಯಾತ್ರೆ
ಚನ್ನಗಿರಿ ಪಟ್ಟಣದಲ್ಲಿ ಇಂದು ಆಯೋಜನೆಯಾಗಿದ್ದ ಬಿಜೆಪಿ ವಿಜಯ ಸಂಕಲ್ಪಯಾತ್ರೆಯು ಎರಡು ಬಣಗಳ ನಡುವೆ ತಿಕ್ಕಾಟದಿಂದ ಅರ್ಧಕ್ಕೆ ಮೊಟಕುಗೊಂಡಿದೆ.
ದಾವಣಗೆರೆ (ಮಾ.19): ಚನ್ನಗಿರಿ ಪಟ್ಟಣದಲ್ಲಿ ಇಂದು ಆಯೋಜನೆಯಾಗಿದ್ದ ಬಿಜೆಪಿ ವಿಜಯ ಸಂಕಲ್ಪಯಾತ್ರೆಯು ಎರಡು ಬಣಗಳ ನಡುವೆ ತಿಕ್ಕಾಟದಿಂದ ಅರ್ಧಕ್ಕೆ ಮೊಟಕುಗೊಂಡಿದೆ. ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಹೆಚ್.ಎಸ್. ಶಿವಕುಮಾರ್ ಹಾಗೂ ಹಾಲಿ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ಉಂಟಾಗಿರುವ ಹಿನ್ನೆಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನೇ ನಿಲ್ಲಿಸಲಾಗಿದೆ.
ಚನ್ನಗಿರಿ ಹಾಲಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಇನ್ನೊಬ್ಬ ಪುತ್ರ ಮಾಡಾಳು ಪ್ರಶಾಂತ್ ಅವರು ಲಂಚವನ್ನು ಪಡೆಯುವಾಗ ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕಣದಲ್ಲಿ ಒಟ್ಟು ಲೋಕಾಯುಕ್ತರಿಗೆ 6 ಕೋಟಿ ರೂ. ಲಭ್ಯವಾಗಿದ್ದು, ಅನಧಿಕೃತ ಹಣ ಸಂಪಾದನೆಗೆ ಶಾಸಕ ಮಾಡಾಳು ವಿರುಪಾಕ್ಷಪ್ಪ ಎ1 ಆರೋಪಿ ಎಂದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ. ಇನ್ನು ಆರೋಪಿ ಸ್ಥಾನದಲ್ಲಿರುವ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಅನುಮಾನವಾಗಿದೆ. ಆದ್ದರಿಂದ ಇದೇ ಕ್ಷೇತ್ರದಿಂದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಎಚ್.ಎಸ್. ಶಿವಕುಮಾರ್ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಂಚೂಣಿಗೆ ಬಂದಿದ್ದಾರೆ. ಇದನ್ನು ಸಹಿಸಲಾಗದೇ ಮಾಡಾಳು ವಿರುಪಾಕ್ಷಪ್ಪ ಅಭಿಮಾನಿಗಳ ಬಣದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಚನ್ನಗಿರಿ ವಿಜಯಸಂಕಲ್ಪ ಯಾತ್ರೆಗೆ ಮಾಡಾಳು ಕುಟುಂಬ ನೇತೃತ್ವ ವಹಿಸುವಂತೆ ಬೆಂಬಲಿಗರು ಒತ್ತಾಯ
ಎರಡು ಬಣದಲ್ಲಿ ವಾಗ್ವಾದ ಆರಂಭ: ಚನ್ನಗಿರಿಯಲ್ಲಿ ಅದ್ಧೂರಿಯಾಗಿ ಆಯೋಜನೆಗೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಶಾಸಕ ರೇಣುಕಾಚಾರ್ಯ ಅವರಿದ್ದ ಯಾತ್ರೆಯ ವಾಹನವೂ ಅದ್ಧೂರಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಆದರೆ, ಯಾತ್ರೆಯು ಚನ್ನಗಿರಿ ಪಟ್ಟಣ ಬಸ್ ಸ್ಟ್ಯಾಂಡ್ ಮುಂಭಾಗ ಆಗಮಿಸುತ್ತಿದ್ದಂತೆ ಎಣ್ಣೆ ಸೀಗೆಕಾಯಿಯಂತಿದ್ದ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಬಣ ಹಾಗೂ ಚನ್ನಗಿರಿಯಲ್ಲಿ ಬಿಜೆಪಿ ಟಿಕೆಟ್ ಹೊಸ ಆಕಾಂಕ್ಷಿ ಹೆಚ್.ಎಸ್. ಶಿವಕುಮಾರ್ ಬಣದ ನಡುವೆ ವಾಗ್ವಾದ ಶುರುವಾಗಿದೆ.
ಯಾತ್ರೆ ವಾಹನದೊಳಗೆ ಶಿವಕುಮಾರ್‌ನನ್ನು ಹತ್ತಿಸಿಕೊಳ್ಳದ ಮುಖಂಡರು: ಇನ್ನು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮಾಡಾಳ್ ವಿರುಪಾಕ್ಷಪ್ಪ ಹೊರತಾದ ಮತ್ತೊಬ್ಬ ನಾಯಕ ಎಂದೇ ಬಿಂಬಿತ ಆಗಿರುವ ಎಚ್.ಎಸ್. ಶಿವಕುಮಾರ್ ಅವರು ವಿಜಯ ಸಂಕಲ್ಪ ಯಾತ್ರೆ ವಾಹನಕ್ಕೆ ಹತ್ತಲು ಹೋಗಿದ್ದಾರೆ. ಆದರೆ, ಈ ವೇಳೆ ಮಾಡಾಳ್ ಪುತ್ರ ಮಲ್ಲಿಕಾರ್ಜುನ ಹಾಗೂ ಅವರ ಬೆಂಬಲಿಗರು ಯಾತ್ರೆಯ ವಾಹನಕ್ಕೆ ಹತ್ತಿಸಿಕೊಳ್ಳಲಿಲ್ಲ. ಆದ್ದರಿಂದ ಎರಡೂ ಬಣದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ವಾಹನದಲ್ಲಿದ್ದ ನಾಯಕರಿಗೂ ತರಾಟೆ ತೆಗೆದುಕೊಂಡಿದ್ದಾರೆ.
ಮಾಡಾಳ್ ವಿರುಪಾಕ್ಷಪ್ಪ ಜಾಮೀನು ರದ್ದುಗೊಳಿಸಿ: ಸುಪ್ರೀಂ ಕೋರ್ಟ್ ಮೊರೆಹೋದ ಲೋಕಾಯುಕ್ತ ಪೊಲೀಸರು
ಯಾತ್ರೆ ವಾಹನ ಇಳಿದು ಹೊರಟ ನಾಯಕರು: ಇನ್ನು ಸ್ಥಳೀಯ ಲೋಕಸಭಾ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರ ಮಾತನ್ನು ಯಾವೊಬ್ಬ ಕಾರ್ಯಕರ್ತರೂ ಆಲಿಸಲು ಸಿದ್ಧರಿರಲಿಲ್ಲ. ಇನ್ನು ನೆರೆಹೊರೆ ಕ್ಷೇತ್ರವಾದ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕಾರ್ಯಕರ್ತರನ್ನು ಸಮಾಧಾನ ಮಾಡಲು ಮುಂದಾದರೂ ಅವರನ್ನೇ ನೂಕಾಟ- ತಳ್ಳಾಟದ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವಿಜಯಸಂಕಲ್ಪ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಕಾರುಗಳನ್ನು ಹತ್ತಿ ಮನೆಯತ್ತ ಸಾಗಿದರು.