ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಮೊದಲ ಪಟ್ಟಿ ಘೋಷಣೆ ಬಗ್ಗೆ ಚರ್ಚಿಸಲು ಈ ವಾರಾಂತ್ಯದೊಳಗೆ ದೆಹಲಿಯಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳು ಸೇರಿದಂತೆ ಗೊಂದಲವಿಲ್ಲದ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.  

ಬೆಂಗಳೂರು (ಮಾ.05): ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಮೊದಲ ಪಟ್ಟಿ ಘೋಷಣೆ ಬಗ್ಗೆ ಚರ್ಚಿಸಲು ಈ ವಾರಾಂತ್ಯದೊಳಗೆ ದೆಹಲಿಯಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳು ಸೇರಿದಂತೆ ಗೊಂದಲವಿಲ್ಲದ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಈ ಸಭೆಯ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಂಭವನೀಯರ ಪಟ್ಟಿಯನ್ನು ಅಖೈರು ಮಾಡಿ ದೆಹಲಿಗೆ ಕಳುಹಿಸಲು ಸೋಮವಾರ ವಿಸ್ತೃತ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಸುಮಾರು 15 ಕ್ಷೇತ್ರಗಳ ಹೆಸರನ್ನು ಅಖೈರುಗೊಳಿಸುವ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಕುತೂಹಲಕಾರಿ ಸಂಗತಿಯೆಂದರೆ, ಚರ್ಚೆಯಾಗಿರುವ ಮೊದಲ 15 ಮಂದಿಯ ಪಟ್ಟಿಯಲ್ಲಿ ಹಾಲಿ ಸಚಿವರ ಪೈಕಿ ಒಬ್ಬರ ಹೆಸರು ಮಾತ್ರ ಇದೆ. ಅದು ಕೋಲಾರ ಕ್ಷೇತ್ರಕ್ಕೆ ಕೆ.ಎಚ್‌. ಮುನಿಯಪ್ಪ. ಇನ್ನು ಹಾಲಿ ಶಾಸಕರ ಪೈಕಿ ಬೆಂಗಳೂರು ಕೇಂದ್ರಕ್ಕೆ ಎನ್‌.ಎ. ಹ್ಯಾರೀಸ್‌ ಅವರ ಹೆಸರು ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರ ಹೆಸರನ್ನು ಕಲಬುರಗಿ ಕ್ಷೇತ್ರಕ್ಕೆ ಅಖೈರುಗೊಳಿಸಲಾಗಿದೆ. 

ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್

ಉಳಿದಂತೆ ಶಿವಮೊಗ್ಗ ಕ್ಷೇತ್ರಕ್ಕೆ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್‌, ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ. ಸುರೇಶ್‌, ಮಂಡ್ಯ ಕ್ಷೇತ್ರಕ್ಕೆ ಸ್ಟಾರ್‌ ಚಂದ್ರು (ವೆಂಕಟೇರಮಣಗೌಡ), ಮೈಸೂರಿಗೆ ಲಕ್ಷ್ಮಣ್‌, ಹಾಸನಕ್ಕೆ ಶ್ರೇಯಸ್‌ ಪಟೇಲ್‌, ತುಮಕೂರಿಗೆ ಈಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುದ್ದಹನುಮೇಗೌಡ, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಸೇರಿ 15 ಕ್ಷೇತ್ರಗಳಿಗೆ ಹೆಸರು ಅಖೈರುಗೊಳಿಸಿ, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಇನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಪರಿಗಣಿಸಲಾಗಿದ್ದರೂ, ಜಿಲ್ಲೆಯ ಶಾಸಕರು ತೀವ್ರ ವಿರೋಧ ಮಾಡುತ್ತಿರುವುದರಿಂದ ಇನ್ನೂ ಗೊಂದಲವಿದೆ. ಜಿಲ್ಲಾಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷರಾಗಿರುವ ಡಾ. ಅಂಶುಮಂತ್‌ ಅವರ ಹೆಸರು ಪರಿಗಣನೆಯಲ್ಲಿದೆ.

ಗ್ಯಾರಂಟಿ ಸಮಿತಿಗೆ ಜಿಲ್ಲಾಧ್ಯಕ್ಷರ ಹೆಸರು ವಾರದೊಳಗೆ ಘೋಷಣೆ?: ಗ್ಯಾರಂಟಿ ಯೋಜನೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನುಷ್ಠಾನ ಸಮಿತಿಗಳ ಅಧ್ಯಕ್ಷರು, ಸದಸ್ಯರ ನೇಮಕಾತಿ ಪಟ್ಟಿಯನ್ನು ಇದೇ ಸಭೆಯಲ್ಲಿ ಅಂತಿಮಗೊಳಿಸಲಾಗಿದ್ದು, ಈ ವಾರಾಂತ್ಯದೊಳಗೆ ಜಿಲ್ಲಾಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಿದರು ಎನ್ನಲಾಗಿದೆ. ಈಗಾಗಲೇ ರಾಜ್ಯಮಟ್ಟದ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿದಿದೆ. ಬಾಕಿ ಉಳಿದಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಠಾನ ಸಮಿತಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಚರ್ಚಿಸಿರುವುದಾಗಿ ತಿಳಿದುಬಂದಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ತೇವೆ: ಕೋಟ ಶ್ರೀನಿವಾಸ ಪೂಜಾರಿ

ರಾಜ್ಯದಲ್ಲಿ ಫೈನಲ್‌ ಆಗಿರುವ ಪಟ್ಟಿ
ಬೆಂಗಳೂರು ಗ್ರಾಮಾಂತರ - ಡಿ.ಕೆ. ಸುರೇಶ್‌
ಮಂಡ್ಯ- ಸ್ಟಾರ್ ಚಂದ್ರು (ವೆಂಕಟೇರಮಣಗೌಡ)
ತುಮಕೂರು- ಎಸ್‌.ಪಿ. ಮುದ್ದಹನುಮೇಗೌಡ
ಮೈಸೂರು- ಎಂ. ಲಕ್ಷ್ಮಣ್
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಕೋಲಾರ- ಕೆ.ಎಚ್‌. ಮುನಿಯಪ್ಪ
ಬೆಂಗಳೂರು ಕೇಂದ್ರ-ಎನ್‌.ಎ. ಹ್ಯಾರೀಸ್‌
ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ
ಹಾಸನ- ಶ್ರೇಯಸ್‌ ಪಟೇಲ್
ಶಿವಮೊಗ್ಗ - ಗೀತಾ ಶಿವರಾಜಕುಮಾರ್
ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ
ವಿಜಯಪುರ- ಮಾಜಿ ಶಾಸಕ ರಾಜು ಅಲಗೂರು
ಬೀದರ್‌- ರಾಜಶೇಖರ್ ಪಾಟೀಲ್
ಕಲಬುರಗಿ- ರಾಧಾಕೃಷ್ಣ
ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್‌ ಹೆಗ್ಡೆ/ ಡಾ. ಅಂಶುಮಂತ್