Asianet Suvarna News Asianet Suvarna News

'ಲೋಕ'ಸಮರ: ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ರೆಡಿಯಾಯ್ತು ಸ್ಪೆಷಲ್ ಟೀಂ..!

ರಂಗೇರಿದ ಕಲಬುರಗಿ ಲೋಕಸಭಾ ಕ್ಷೇತ್ರ! ಮಲ್ಲಿಕಾರ್ಜುನ ಖರ್ಗೆ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ರೆಡಿಯಾಯ್ತು ಟೀಂ! ಈ ಟೀಂನೊಂದಿಗೆ ಬಿಜೆಪಿ ಚುನಾವಣೆ ಅಖಾಡಕ್ಕೆ!  

Loksabha Elections 2019 BJP Plans To Defeat Congress Leader Mallikarjuna Kharge In Kalaburagi
Author
Bengaluru, First Published Feb 18, 2019, 4:07 PM IST

ಕಲಬುರಗಿ, [ಫೆ.18]: ಲೋಕಸಭೆ ಕಾಂಗ್ರೆಸ್ ನಾಯಕ, ‘ಸೋಲಿಲ್ಲದ ಸರದಾರ’ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸುವ ಕಲಬುರಗಿ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿ ಅಖಾಡವಾಗು​ವುದು ಖಚಿತವಾಗಿದೆ.

ಸತತ 9 ಬಾರಿ ಅಸೆಂಬ್ಲಿ ಹಾಗೂ 2 ಬಾರಿ ಲೋಕಸಭಾ ಚುನಾವಣೆ ಗೆದ್ದಿರುವ ಕಾಂಗ್ರೆಸ್‌ನ ‘ಗೆಲ್ಲುವ ಕುದುರೆ’ ಡಾ. ಮಲ್ಲಿಕಾರ್ಜುನ ಖರ್ಗೆ ಗೆಲುವಿನ ‘ನಾಗಾಲೋಟ’ಕ್ಕೆ ಬ್ರೇಕ್‌ ಹಾಕಲು ಬಿಜೆಪಿ ನಾನಾ ಪ್ಲಾನ್ ಮಾಡುತ್ತಿದೆ.

ಈಗಾಗಲೇ ಕಾಂಗ್ರೆಸ್ ತೊರೆದಿರುವ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿರುವ ಬಿಜೆಪಿ, ಎಲ್ಲಾ ಮುಖಂಡರನ್ನು ಒಟ್ಟುಗೂಡಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಲು ತಂತ್ರಗಳನ್ನು ರೂಪಿಸುತ್ತಿದೆ.

ಅತೃಪ್ತ ಶಾಸಕ ಕಾಂಗ್ರೆಸ್‌ ತೊರೆಯುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

ಮಲ್ಲಿ​ಕಾ​ರ್ಜುನ ಖರ್ಗೆ ಹಾಗೂ ಅವರ ಪುತ್ರ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಸೆಟೆ​ದು ನಿಂತು ಪಕ್ಷ​ದಿಂದಲೇ ಒಂದು ಕಾಲನ್ನು ಹೊರಗೆ ಇಟ್ಟಿ​ರುವ ಚಿಂಚೋಳಿ ಶಾಸಕ ಡಾ. ಉಮೇ​ಶ್‌ ಜಾಧವ್‌ ಅವರು ಬಿಜೆ​ಪಿಯ ‘ಆಪ​ರೇ​ಷನ್‌ ಕಮ​ಲ’ಕ್ಕೆ ಒಳ​ಗಾಗಿದ್ದು, ಲೋಕ​ಸ​ಭೆ​ಯಲ್ಲಿ ಖರ್ಗೆ ಎದುರು ಸ್ಪರ್ಧಿ​ಸ​ಲಿ​ದ್ದಾರೆ ಎನ್ನುವ ಮಾತುಗಳು ದಟ್ಟವಾಗಿವೆ.  

ಖರ್ಗೆ ಪುತ್ರ ವ್ಯಾಮೋಹಕ್ಕೆ ಸಿಡಿದೆದ್ದ ನಾಯಕರು
ಹೌದು..ಮೂರ್ನಾಲ್ಕು ಬಾರಿ ಗೆದ್ದಿರುವವರನ್ನು ಕಡೆಗಣಿಸಿ ತಮ್ಮ ಪುತ್ರನಿಗೆ ಸಚಿವ ಸ್ಥಾನ ಕೊಡಿಸಿದ್ದಾರೆ ಎನ್ನುವ ಆರೋಪಗಳು ಸಹ ಮಲ್ಲಿಕಾರ್ಜುನ ಖರ್ಗೆ ಅವರ ಮೇಲಿವೆ. ಉಮೇಶ್ ಜಾಧವ್ ಹಾಗೂ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಅವರಿಗೆ ಮಂತ್ರಿಗಿರಿ ತಪ್ಪಿಸಿ ಪುತ್ರ ವ್ಯಾಮೋಹಕ್ಕೆ ಕಟ್ಟು ಬಿದ್ದಿದ್ದರಿಂದ ಕೆಲ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಬಾಬುರಾವ್ ಚೌಹಾಣ್, ಮಾಲೀಕಯ್ಯ ಗುತ್ತೇದಾರ್ ಈಗಾಗಲೇ ಖರ್ಗೆ ಸರ್ವಾಡಳಿತದಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇವರ ಸಾಲಿಗೆ ಚಿಂಚೊಳ್ಳಿ ಶಾಸಕ ಡಾ. ಉಮೇಶ್ ಜಾಧವ್ ಕೂಡ ಸೇರಿಕೊಂಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಅವರ ಸರ್ವಾಡಳಿತಕ್ಕೆ ಬೇಸತ್ತಿದ್ದು, ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ. 

ಖರ್ಗೆಯನ್ನು ಸೋಲಿಸಲು ಪಣತೊಟ್ಟ ಕಾಂಗ್ರೆಸ್  ಮಾಜಿ ಟೀಂ

ಈಗಾಗಲೇ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿಕೊಂಡಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಬಾಬುರಾವ್ ಚೌಹಾಣ್, ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಇನ್ನುಳಿದ ನಾಯಕರು ಒಟ್ಟಾಗಿ ಕೂಡಿಕೊಂಡು ಹೇಗಾದರೂ ಮಾಡಿ ಖರ್ಗೆ ಅವರನ್ನು ಸೋಲಿಸಬೇಕೆಂದು ಪಣತೊಟ್ಟಿದ್ದಾರೆ.

ಇದಕ್ಕಾಗಿ ರಾಜ್ಯ ಬಿಜೆಪಿ ಸಹ ಕಾಂಗ್ರೆಸ್ ಮಾಜಿ ನಾಯಕರು ಒಟ್ಟಾಗಿ ಸೇರಿಸಿ ಚುನಾವಣೆ ಅಖಾಡಕ್ಕಿಳಿಯಲು ಮಾಸ್ಟರ್ ಪ್ಲಾನ್ ಮಾಡಿದೆ. ಇದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ಬಿಜೆಪಿ ಶುರು ಮಾಡಿಕೊಂಡಿದೆ. 

ಹಿಂದುಳಿದ ನಾಯಕರ ಜೊತೆಗೆ ಹಿಂದುತ್ವ ಆಧಾರದ ಮೇಲೆ ಮೇಲ್ವರ್ಗದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಖರ್ಗೆ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ರಣತಂತ್ರಗಳನ್ನು ಹಣೆಯುತ್ತಿದೆ. ಮತ್ತೊಂದೆಡೆ ಕಳೆದೊಂದು ತಿಂಗಳಿಂದ ಖರ್ಗೆ ಕುಟುಂಬದ ವಿರುದ್ಧ ಹರಿಹಾಯುತ್ತಲೇ ತಮ್ಮ ಸಮಾಜದ ಮತಗಳ ಜೊತೆಗೆ ಮೇಲ್ವರ್ಗದ ಮತಗಳ ಕಟ್ಟು ಕಟ್ಟಿಕೊಂಡು ಡಾ. ಜಾಧವ ಬಿಜೆಪಿ ಹುರಿಯಾಳಾಗುವ ಹವಣಿಕೆಯಲ್ಲಿದ್ದಾರೆ. 

ಒಟ್ಟಿನಲ್ಲಿ ಸತತ 2 ಬಾರಿ ಕಲಬುರಗಿ ಕ್ಷೇತ್ರದಿಂದ ಆಯ್ಕೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಬಾರಿ ಖರ್ಗೆ ಮಣಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಇದರಿಂದ ಈ ಬಾರಿಯ ಕಲಬುರಗಿ ಲೋಸಕಭಾ ಪೈಪೋ​ಟಿ ರೋಚ​ಕ​ತೆ​ಯನ್ನು ಹೆಚ್ಚಿ​ಸಿದೆ.

Follow Us:
Download App:
  • android
  • ios