ಲೋಕಸಭಾ ಚುನಾವಣೆ 2024: ತುಮಕೂರಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯಾರು?
ಲೋಕಸಭಾ ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲು ಆರಂಭವಾಗಿವೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವುದು ಕ್ಷೇತ್ರದ ವಿಶೇಷ.
ಉಗಮ ಶ್ರೀನಿವಾಸ್
ತುಮಕೂರು (ಜ.8) : ಲೋಕಸಭಾ ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲು ಆರಂಭವಾಗಿವೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವುದು ಕ್ಷೇತ್ರದ ವಿಶೇಷ.
ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಅವರು ವಯಸ್ಸಿನ ಕಾರಣ ಕೊಟ್ಟು ಮತ್ತೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಮಧ್ಯೆ ಈಗಾಗಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷ ತುಮಕೂರು ಕ್ಷೇತ್ರ ತನಗೆ ಬಿಟ್ಟುಕೊಡುವಂತೆ ಪಟ್ಟು ಹಿಡಿದು ಕೂತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್.ಡಿ.ದೇವೇಗೌಡರನ್ನು ಬೆಂಬಲಿಸಿದ್ದ ಕಾಂಗ್ರೆಸ್ ಈ ಬಾರಿ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ.
ಮಂಡ್ಯ ಲೋಕಸಭಾ ಕಣದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ! ಜೆಡಿಎಸ್ ಸಜ್ಜು, ಸುಮಲತಾ ನಡೆ ಏನು?
ವಾಸ್ತವವಾಗಿ 11 ವಿಧಾನಸಭಾ ಕ್ಷೇತ್ರಗಳು ತುಮಕೂರು ಜಿಲ್ಲೆಯಲ್ಲಿದ್ದರೂ ಲೋಕಸಭಾ ವ್ಯಾಪ್ತಿಗೆ ಬರುವುದು ಕೇವಲ 8 ಮಾತ್ರ. ಶಿರಾ, ಪಾವಗಡ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹಾಗೂ ಕುಣಿಗಲ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರುವುದರಿಂದ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಲೋಕಸಭಾ ಚುನಾವಣೆಗೆ ತುಮಕೂರು ಸಜ್ಜಾಗುತ್ತಿದೆ. ಈ 8 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕಾಂಗ್ರೆಸ್, 2 ಬಿಜೆಪಿ ಹಾಗೂ 2 ಜೆಡಿಎಸ್ ಪಕ್ಷ ಗೆದ್ದಿದೆ.
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ಒಕ್ಕಲಿಗ ಸಮುದಾಯದ ಮುದ್ದಹನುಮೇಗೌಡ ಬಿಜೆಪಿ ಟಿಕೆಟ್ ಆಕಾಂಕ್ಷಿ. ಇವರಲ್ಲದೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್, ವಿನಯ ಬಿದರೆ, ವಕ್ತಾರ ಹೆಚ್.ಎನ್. ಚಂದ್ರಶೇಖರ್ ಮುಂತಾದವರೂ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಮಿತ್ರಪಕ್ಷವಾದ ಜೆಡಿಎಸ್ ತುಮಕೂರು ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಕೇಳುತ್ತಿದೆ. ಒಂದು ವೇಳೆ ಬಿಜೆಪಿಯೇನಾದರೂ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇ ಆದರೆ ಖುದ್ದು ಕುಮಾರಸ್ವಾಮಿಯೇ ಸ್ಪರ್ಧಿಸುತ್ತಾರೆಂಬ ಮಾತು ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಸೀಟು ಹಂಚಿಕೆ ಆಗುವವರೆಗೆ ಇಲ್ಲಿ ಎಲ್ಲವೂ ಗೊಂದಲದ ಗೂಡಾಗಿ ಪರಿಣಮಿಸಿದೆ.
ಇನ್ನು ಕಾಂಗ್ರೆಸ್ ನಿಂದ ಮಾತ್ರ ಐದಾರು ಹೆಸರುಗಳು ಬಲವಾಗಿ ಕೇಳಿ ಬರುತ್ತಿವೆ. ಈ ಪೈಕಿ ಹಾಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೇ ಸ್ಪರ್ಧಿಸಬಹುದು ಎಂಬ ಚರ್ಚೆ ನಡೆಯುತ್ತಿದೆ. ಖುದ್ದು ರಾಜಣ್ಣ ಅವರೂ ಹೈಕಮಾಂಡ್ ಒಪ್ಪಿದರೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಉಳಿದಂತೆ ಮುರಳೀಧರ ಹಾಲಪ್ಪ, ನಿಕೇತ್ ರಾಜ್ ಮೌರ್ಯ ಹೆಸರು ಕೂಡ ಚಾಲ್ತಿಯಲ್ಲಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ, ಆದರೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಪಕ್ಷದ ಮೈತ್ರಿಯಿಂದಾಗಿ ದೇವೇಗೌಡರಿಗೆ ಅನಿವಾರ್ಯವಾಗಿ ಸ್ಥಾನ ಬಿಟ್ಟುಕೊಟ್ಟಿದ್ದ ಮುದ್ದೇಹನುಮೇಗೌಡರು ನಂತರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೀಗ ಮುದ್ದಹನುಮೇಗೌಡರ ಮುನಿಸು ಶಮನಗೊಳಿಸಿ ಅವರನ್ನು ವಾಪಸ್ ಕಾಂಗ್ರೆಸ್‌ಗೆ ಕರೆತಂದು ಟಿಕೆಟ್ ನೀಡಬಹುದು ಎಂಬ ಚರ್ಚೆಯೂ ನಡೆದಿದೆ.
ಸಿದ್ದರಾಮಯ್ಯ ತಾಕೀತು ಬೆನ್ನಲ್ಲೇ ಅಖಾಡಕ್ಕಿಳಿದ ಸಚಿವರು: ಕೊಪ್ಪಳ ಕಾಂಗ್ರೆಸ್‌ನಲ್ಲಿ ಗರಿಗೆದರಿದ ಲೋಕಸಮರ ಸರ್ಕಸ್
ವಲಸೆ ಪರ್ವ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ವಲಸೆ ಕೂಡ ಜೋರಾಗಿ ನಡೆಯುತ್ತಿದೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಗೌರಿಶಂಕರ್ ಅವರು ಕಾಂಗ್ರೆಸ್ ಗೆ ಹೋಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ನಿಂದ ಪರಾಭವಗೊಂಡಿದ್ದ ಗೌರಿಶಂಕರ್ ಅವರೇ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗುತ್ತಾರೆಂಬ ಚರ್ಚೆ ನಡೆದಿತ್ತು. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದನ್ನು ವಿರೋಧಿಸಿ ಅವರು ಪಕ್ಷ ತೊರೆದಿದ್ದರು. ಸದ್ಯ ಜೆಡಿಎಸ್ ನಲ್ಲಿ ಯಾರು ಅಭ್ಯರ್ಥಿ ಎನ್ನುವುದು ಚರ್ಚೆಯಾಗಿಲ್ಲ. ಅಲ್ಲದೆ, ಜಿಲ್ಲಾ ಜೆಡಿಎಸ್ ಸಭೆ ನಡೆಸಿ ಒಂದು ವೇಳೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಬಿಜೆಪಿ, ಜೆಡಿಎಸ್ ಗೆ ಬಿಟ್ಟು ಕೊಟ್ಟರೆ ಕುಮಾರಸ್ವಾಮಿಯೇ ಸ್ಪರ್ಧಿಸಬೇಕೆಂಬ ಒತ್ತಾಯ ಮಾಡಿದ್ದಾರೆ.