ರಾಜ್ಯದಲ್ಲಿ ತಾಲಿಬಾನ್ ಆಡಳಿತ ಇದೆಯೇ?: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಕೊಲೆ, ಸುಲಿಗೆ ಪ್ರಕರಣಗಳನ್ನು ನೋಡಿದರೆ ರಾಜ್ಯದಲ್ಲಿ ತಾಲಿಬಾನ್ ಆಡಳಿತವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬಂಟ್ವಾಳ (ಏ.21): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ಕೊಲೆ, ಹಲ್ಲೆಗಳು ನಿತ್ಯ ನಡೆಯುತ್ತಿವೆ. ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂಬ ಸಂಶಯ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್‌ಗೆ ಹಿಂದು ಯುವತಿ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಮೋದಿಯನ್ನು ಹೊಗಳಿದರೆ, ಹನುಮಾನ್ ಚಾಲಿಸಾ ಹೇಳಿದರೆ ಹಲ್ಲೆಗಳಾಗುತ್ತಿವೆ. ಒಂದೇ ವಾರದಲ್ಲಿ 8 ಹಿಂದುಗಳ ಕೊಲೆಗಳಾಗಿದೆ. ಆದರೆ ಸರ್ಕಾರ ಅದೆಲ್ಲಾ ವೈಯಕ್ತಿಕ, ಆಕಸ್ಮಿಕ ಎಂದು ಹಗುರವಾಗಿ ತೆಗೆದುಕೊಳ್ಳುತ್ತಿದೆ.
ಸರ್ಕಾರ ಇನ್ನೂ ಗ್ಯಾರಂಟಿಗಳ ಭ್ರಮಾಲೋಕದಲ್ಲಿದೆ. ಇದನ್ನು ನೋಡಿಯೂ ಬಿಜೆಪಿ ಸುಮ್ಮನಿರುವುದಿಲ್ಲ. ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ ಎಂದರು. 2014ರ ಮುನ್ನ ಭಾರತದಲ್ಲಿ ಅಭಿವೃದ್ಧಿಯಾಗುವುದಿಲ್ಲ, ಭ್ರಷ್ಟಾಚಾರ ನಿಲ್ಲುವುದಿಲ್ಲ, ಇಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಯುವಜನತೆ ನಿರಾಶರಾಗಿದ್ದರು. ಆದರೆ ಮೋದಿ ಅದನ್ನೆಲ್ಲ ಸಾಧ್ಯವಾಗಿಸಿದ್ದಾರೆ. ಮೋದಿ ದೇಶದ ಯುವಜನತೆ ಮೇಲೆ ವಿಶ್ವಾಸ ಇಟ್ಟಿದ್ದಾರೆ. ದೇಶದಲ್ಲಿ ಮಾತ್ರವಲ್ಲ, ರಾಜ್ಯದಲ್ಲಿಯೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಬೇಕಾಗಿದೆ ಎಂದವರು ಹೇಳಿದರು.
ವೇದಿಕೆಯಲ್ಲಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ರಾಜ್ಯ ಬಿಜೆಪಿ ಕಾರ್ಯದರ್ಶಿ ವಿ.ಸುನಿಲ್ ಕುಮಾರ್, ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಹರೀಶ್ ಪೂಂಜಾ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ರಾಜ್ಯ ಮಹಿಳಾಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ.ಜಿ ಸುವರ್ಣ, ಜಿ.ಪ್ರ.ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಪ್ರಖ್ಯಾತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಕೊಟ್ಟ ಖಾಲಿ ಚೊಂಬನ್ನು ಮೋದಿ ಅಕ್ಷಯಪಾತ್ರೆ ಮಾಡಿದರು: ಎಚ್.ಡಿ.ದೇವೇಗೌಡ
ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರ.ಕಾರ್ಯದರ್ಶಿ ಶಶಾಂಕ್ ಶಿವತ್ತಾಯ ಸ್ವಾಗತಿಸಿದರು. ಸಭೆಗೆ ಮೊದಲು ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದವರೆಗೆ, ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಉಡುಪಿಗೆ ಬಂದ ಬಿ.ವೈ.ವಿಜಯೇಂದ್ರ ಅವರನ್ನು ರೋಡ್ ಶೋ ಮೂಲಕ ಕರೆ ತರಲಾಯಿತು. ನಂತರ ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಮತ್ತು ಯುವ ಮೋರ್ಚಗಳಿಂದ ಸನ್ಮಾನಿಸಲಾಯಿತು.