ಎಚ್‌ಡಿ ಕುಮಾರಸ್ವಾಮಿ ಗೆಲುವು ಮಂಡ್ಯ ಜಿಲ್ಲೆಯಲ್ಲಿ ದ್ವೇಷ ರಾಜಕಾರಣಕ್ಕೆ ನಾಂದಿ!

 ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವಿನೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ

Lok sabha election result 2024 highlights minister Chaluvarayaswamy reacts about HD Kumaraswamy rav

ಮಂಡ್ಯ ಮಂಜುನಾಥ

 ಮಂಡ್ಯ ;  ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವಿನೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದಂತಾಗಿದೆ. ತಮ್ಮ ರಾಜಕೀಯ ಬದ್ಧವೈರಿಯಾಗಿರುವ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಸಮರಕ್ಕೆ ಅಖಾಡ ಸಿದ್ಧವಾದಂತಾಗಿದೆ. ಇದರೊಂದಿಗೆ ಜಿಲ್ಲೆಯ ಅಭಿವೃದ್ಧಿ ಗೌಣವಾಗುವ ಆತಂಕವೂ ಮನೆಮಾಡಿದೆ.

ಜಿಲ್ಲಾ ರಾಜಕಾರಣದಿಂದ ಹೊರಗಿದ್ದ ಸಮಯದಲ್ಲೇ ಎಚ್.ಡಿ.ಕುಮಾರಸ್ವಾಮಿ ಮತ್ತು ಎನ್.ಚಲುವರಾಯಸ್ವಾಮಿ ಅವರು ಹಾವು-ಮುಂಗುಸಿಯಂತೆ ಕಾದಾಟ ನಡೆಸುತ್ತಿದ್ದರು. ಇದೀಗ ಕುಮಾರಸ್ವಾಮಿ ಜಿಲ್ಲಾ ರಾಜಕಾರಣ ಪ್ರವೇಶಿಸುತ್ತಿರುವುದರಿಂದ ಇಬ್ಬರ ನಡುವಿನ ಕದನ ಮತ್ತಷ್ಟು ತಾರಕಕ್ಕೇರಬಹುದು ಎಂದು ಹೇಳಲಾಗುತ್ತಿದೆ.

ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲವಾಗಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು ನಿಂತರೆ, ಸಚಿವ ಎನ್. ಚಲುವರಾಯಸ್ವಾಮಿ ಬೆಂಬಲಕ್ಕೆ ಕಾಂಗ್ರೆಸ್ ಶಾಸಕರು ನಿಲ್ಲುವ ಸಾಧ್ಯತೆಗಳಿವೆ. ಕುಮಾರಸ್ವಾಮಿ ನಡೆಸುವ ದಿಶಾ ಸಭೆಗಳಿಗೆ ಕಾಂಗ್ರೆಸ್ಸಿಗರು ಗೈರು ಹಾಜರಾಗುವ ಮತ್ತು ಸಚಿವ ಎನ್.ಚಲುವರಾಯಸ್ವಾಮಿ ನಡೆಸುವ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗಳಿಗೆ ಕುಮಾರಸ್ವಾಮಿ ಗೈರು ಹಾಜರಾಗುವ ಬೆಳವಣಿಗೆಗಳು ನಡೆಯಬಹುದು. ಸಂಸದೆ ಸುಮಲತಾ ಅಂಬರೀಶ್ ಅವಧಿಯಲ್ಲೂ ಜೆಡಿಎಸ್ ಶಾಸಕರು ಬಹುತೇಕ ಸಭೆಗಳಿಗೆ ಗೈರು ಹಾಜರಾಗಿ ಅಸಹಕಾರ ತೋರಿದ್ದನ್ನು ಇಲ್ಲಿ ಸ್ಮರಿಸಬಹುದು. ಅದೀಗ ಕುಮಾರಸ್ವಾಮಿ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಂದ ಪುನರಾವರ್ತನೆ ಆಗಬಹುದರೂ ಆಶ್ಚರ್ಯಪಡಬೇಕಿಲ್ಲ

ಗೆಲುವಿನ ಅಂತರದಲ್ಲಿ ಅಂಬರೀಶ್ ದಾಖಲೆ ಎಚ್‌ಡಿಕೆ ಧೂಳೀಪಟ..!

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಎನ್.ಚಲುವರಾಯಸ್ವಾಮಿ ಕೈಗೊಳ್ಳುವ ನಿರ್ಧಾರ, ಜಾರಿಗೆ ತರುವ ಯೋಜನೆಗಳಿಗೆ ಸಂಸದರಾಗಿ ಎಚ್.ಡಿ.ಕುಮಾರಸ್ವಾಮಿ ಅಡ್ಡಗಾಲಾಗುವುದು, ಎಚ್.ಡಿ.ಕುಮಾರಸ್ವಾಮಿ ತರುವ ಯೋಜನೆಗಳಿಗೆ ಕಾಂಗ್ರೆಸ್ಸಿಗರು ಅಡ್ಡಿಯಾಗುವ ಸಾಧ್ಯತೆಗಳೂ ಇವೆ. ಇದರಿಂದ ಅಭಿವೃದ್ಧಿ ಚಲನಶೀಲತೆ ಕಳೆದುಕೊಂಡು ನಿಷ್ಕ್ರೀಯವಾಗಬಹುದು. ಸ್ವಾಮಿಧ್ವಯರ ಕದನದ ನಡುವೆ ಅಧಿಕಾರಿಗಳೂ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗದಂತಹ ವಾತಾವರಣ ಸೃಷ್ಟಿಯಾಗುವ ಭೀತಿ ಈಗಲೇ ಶುರುವಾಗಿದೆ.

ಇಬ್ಬರ ನಡುವಿನ ದ್ವೇಷದ ರಾಜಕಾರಣ ಎರಡೂ ಪಕ್ಷಗಳ ಮುಖಂಡರು-ಕಾರ್ಯಕರ್ತರ ನಡುವಿನ ತಿಕ್ಕಾಟಕ್ಕೂ ಕಾರಣವಾಗಬಹುದು. ಕಾಂಗ್ರೆಸ್ ಶಾಸಕರು, ಜೆಡಿಎಸ್ ಶಾಸಕರು, ಮಾಜಿ ಶಾಸಕರ ವಾಕ್ಸಮರಗಳಿಗೂ ಎಡೆಮಾಡಿಕೊಡುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿಲ್ಲವೆಂಬ ಕೋಪವನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಚಿವರು-ಶಾಸಕರು ನಿರ್ಲಕ್ಷಿಸಬಹುದು.

ಕಳೆದ ಬಾರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಕೋಪವನ್ನು ಜಿಲ್ಲೆಯ ಅಭಿವೃದ್ಧಿ ಮೇಲೆ ತೋರಿಸಿದ್ದನ್ನು ಸ್ಮರಿಸಬಹುದು. ಅದೀಗ ಕಾಂಗ್ರೆಸ್ಸಿಗರಿಂದ ನಡೆದರೂ ಅಚ್ಚರಿಪಡಬೇಕಿಲ್ಲ. 

ಲೋಕಸಭಾ ಚುನಾವಣಾ ಫಲಿತಾಂಶ: ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ ಕಿಂಗ್ ಮೇಕರ್!

ಎಚ್.ಡಿ.ಕುಮಾರಸ್ವಾಮಿ ಮತ್ತು ಎನ್.ಚಲುವರಾಯಸ್ವಾಮಿ ಇಬ್ಬರೂ ಪ್ರಭಾವಿ ನಾಯಕರಾಗಿದ್ದಾರೆ. ಹಿಂದೆ ಆಪ್ತಮಿತ್ರರಂತಿದ್ದವರು ಈಗ ಬದ್ಧ ವೈರಿಗಳಾಗಿದ್ದಾರೆ. ಚಲುವರಾಯಸ್ವಾಮಿ ಜೆಡಿಎಸ್‌ನಿಂದಲೇ ರಾಜಕೀಯವಾಗಿ ಬೆಳವಣಿಗೆ ಕಂಡರೂ ತಮ್ಮ ವೈಯಕ್ತಿಕ ವರ್ಚಸ್ಸು, ನಾಯಕತ್ವದಿಂದ ಕಾಂಗ್ರೆಸ್‌ನಲ್ಲಿ ಸಚಿವ ಹುದ್ದೆಗೇರಿದ್ದಾರೆ. ಜಿಲ್ಲೆಯೊಳಗೆ ನಾಯಕತ್ವ, ಪ್ರತಿಷ್ಠೆಯ ಸಮರಕ್ಕೆ ಇಬ್ಬರೂ ಇಳಿಯುವುದರಿಂದ ಅಭಿವೃದ್ಧಿ ಮಸುಕಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಇವರಿಬ್ಬರ ರಾಜಕೀಯ ವೈರುಧ್ಯಗಳನ್ನು ಪಕ್ಕಕ್ಕೆ ಸರಿಸಿ ಒಂದೇ ವೇದಿಕೆಯಲ್ಲಿ ಮುನ್ನಡೆಸುವಂತಹ ಯಾವ ಶಕ್ತಿಯೂ ಕಾಣಸಿಗದಿರುವುದರಿಂದ ಮುಂದಿನ ದಿನಗಳಲ್ಲಿ ಇವರಿಬ್ಬರ ನಡುವಿನ ರಾಜಕೀಯ ಪ್ರತಿಷ್ಠೆಯ ಕದನ ಯಾವ ಮಟ್ಟಕ್ಕೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ

Latest Videos
Follow Us:
Download App:
  • android
  • ios