ನವದೆಹಲಿ :  ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಸೀಟು ಹಂಚಿಕೆಯನ್ನು ಜನವರಿ ಅಂತ್ಯದೊಳಗೆ ಮುಗಿಸಿಕೊಳ್ಳಬೇಕು ಎಂಬ ಸೂಚನೆಯನ್ನು ರಾಜ್ಯ ನಾಯಕರಿಗೆ ನೀಡಲಾಗಿದೆ.

ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್‌ನ ಕಾರ್ಯತಂತ್ರಗಳನ್ನು ಹೆಣೆಯಲು ದೆಹಲಿಯಲ್ಲಿ ನಡೆದ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಪಕ್ಷದ ಖಜಾಂಚಿ ಅಹ್ಮದ್‌ ಪಟೇಲ್ ಈ ಸೂಚನೆ ನೀಡಿದ್ದಾರೆ.

ಸಭೆಯ ಬಳಿಕ ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಇಂದಿನ ಸಭೆಯಲ್ಲಿ ಇಂತಹ ಸೂಚನೆ ನಮಗೆ ಸಿಕ್ಕಿದೆ. ಸಂಕ್ರಾಂತಿ ಬಳಿಕ ಜೆಡಿಎಸ್‌ ಜೊತೆಗೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿ, ಜನವರಿ ಅಂತ್ಯದೊಳಗೆ ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ಉಳಿದಂತೆ ಚುನಾವಣಾ ಸಂಬಂಧಿತ ಸಾಮಾನ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯಕ್ಕೆ ಸಂಬಂಧಿಸಿ ನೇರ ವಿಷಯಗಳ ಕುರಿತಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಗುಂಡೂರಾವ್‌ ಹೇಳಿದ್ದಾರೆ.