ಪಶ್ಚಿಮ ಬಂಗಾಳದ ಬಂಕುರಾದ ಬಿಷ್ಣುಪುರ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಪರ್ಧೆ ಕಾಣಲಿದೆ. ಇಲ್ಲಿ ವಿಚ್ಚೇದಿತ ದಂಪತಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡುತ್ತಿದ್ದಾರೆ.

ಕೋಲ್ಕತಾ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಪಕ್ಷಗಳ ನಾಯಕರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯ ಕಾರ್ಯದಲ್ಲಿ ತೊಡಗಿದ್ದು, ಸಾಲು ಸಾಲು ಸಭೆಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಪಶ್ಚಿಮ ಬಂಗಾಳದ ಬಂಕುರಾದ ಬಿಷ್ಣುಪುರ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಪರ್ಧೆ ಕಾಣಲಿದೆ. ಇಲ್ಲಿ ವಿಚ್ಚೇದಿತ ದಂಪತಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡುತ್ತಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವೂ ಸುಜಾತಾ ಮಂಡಲ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಹಾಗೆಯೇ ಬಿಜೆಪಿ ಇಲ್ಲಿ ಸೌಮಿತ್ರಾ ಖಾನ್ ಅವರಿಗೆ ಟಿಕೆಟ್‌ ನೀಡಿದೆ. ಈ ಇಬ್ಬರೂ ಈ ಹಿಂದೆ ಗಂಡ ಹೆಂಡತಿಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬುದು ವಿಶೇಷ.

ಬಿಷ್ಣುಪುರಕ್ಕೆ ಈಗ ಸೌಮಿತ್ರ ಖಾನ್‌ ಹಾಲಿ ಬಿಜೆಪಿ ಸಂಸದರಾಗಿದ್ದು, ಮತ್ತೆ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಟಿಎಂಸಿ ತಮ್ಮ ಮಾಜಿ ಪತ್ನಿಗೆ ಟಿಕೆಟ್‌ ನೀಡಿದ್ದಕ್ಕೆ ವ್ಯಂಗ್ಯವಾಡಿರುವ ಸೌಮಿತ್ರ ಖಾನ್‌ ಅವರು ಟಿಎಂಸಿ ರಾಜಕೀಯ ಅನುಭವ ಇರುವ ಯಾರಾದರೂ ಒಬ್ಬರಿಗೆ ಟಿಕೆಟ್‌ ನೀಡಿದ್ದರೆ ಒಂದೊಳ್ಳೆ ಸ್ಪರ್ಧೆಯಾಗುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ. ಖಾನ್‌ 2019ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2020ರ ಡಿಸೆಂಬರ್‌ನಲ್ಲಿ ಸೌಮಿತ್ರಾ ಖಾನ್ ಮತ್ತು ಸಜಾತಾ ಮಂಡಲ್‌ ಅವರಿಗೆ ವಿಚ್ಛೇದನವಾಗಿತ್ತು.