Lok Sabha Election 2024: ಡಾ.ಸಿ.ಎನ್.ಮಂಜುನಾಥ್ ವಿರುದ್ಧ ಇನ್ನೂ ಮೂವರು ಮಂಜುನಾಥ್ ಸ್ಪರ್ಧೆ
ಈ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅಷ್ಟೇ ಅಲ್ಲ, ಮಂಜುನಾಥ್ ಹೆಸರಿನ ಇನ್ನೂ ನಾಲ್ವರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ರಾಮನಗರ (ಏ.04): ಈ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬಿಜೆಪಿ ಅಭ್ಯರ್ಥಿ ಡಾ।ಸಿ.ಎನ್. ಮಂಜುನಾಥ್ ಅಷ್ಟೇ ಅಲ್ಲ, ಮಂಜುನಾಥ್ ಹೆಸರಿನ ಇನ್ನೂ ನಾಲ್ವರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಹಿಂದೆಯೇ ಘೋಷಣೆ ಮಾಡಿದ್ದಂತೆ ಬಹುಜನ್ ಭಾರತ ಪಾರ್ಟಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್, ಜತೆಗೆ ಇದೀಗ ಪಕ್ಷೇತರರಾಗಿ ಸಿ.ಮಂಜುನಾಥ್, ಎನ್.ಮಂಜುನಾಥ್, ಕೆ.ಮಂಜುನಾಥ್ ಕೂಡ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಸ್ವಇಚ್ಛೆಯಿಂದ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರ ಇರುವ ಮತದಾರರಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್‌ನವರೇ ಅದೇ ಹೆಸರಿನ ಅಭ್ಯರ್ಥಿಯನ್ನು ಹಾಸನದಿಂದ ಕರೆತಂದು ಇಲ್ಲಿ ಕಣಕ್ಕಿಳಿಸುತ್ತಿದ್ದಾರೆಂಬ ಆರೋಪವನ್ನು ಬಹುಜನ್ ಭಾರತ್ ಪಾರ್ಟಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ತಳ್ಳಿಹಾಕಿದ್ದಾರೆ. ಕಾಂಗ್ರೆಸ್‌ನವರ ಬಳಿ ನಾನು ಅರ್ಧ ಕಪ್ ಕಾಫಿನೂ ಕುಡಿದಿಲ್ಲ, ಅವರು ಯಾರೂ ನಮ್ಮನ್ನು ಭೇಟಿ ಮಾಡಿಲ್ಲ. ಬೇಕಾದರೆ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದು ನೋಡಲಿ ಎಂದು ಹೇಳಿದ್ದಾರೆ.
ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ ಪದೇಪದೇ ಸುಳ್ಳು: ಬಿ.ವೈ.ವಿಜಯೇಂದ್ರ
ನಾನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನವನು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು, ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಹಾಸನದಲ್ಲಿ ನಮ್ಮ ಪಕ್ಷದಿಂದ ಬೇರೆಯವರು ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಅವಕಾಶ ಸಿಗದ ಕಾರಣ ಪಕ್ಷದ ವರಿಷ್ಠರ ಸೂಚನೆಯಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಯಾರೊ ಮೂರ್ಖರು ಆ ರೀತಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸ್ವ ಇಚ್ಛೆಯಿಂದ ನಾನು ಸ್ಪರ್ಧೆ ಮಾಡುತ್ತಿದ್ದು, ನನಗೆ ಯಾವುದೇ ಒತ್ತಡ ಇಲ್ಲ. ಗೆಲುವೊಂದೇ ನನ್ನ ಗುರಿ ಎಂದಿದ್ದಾರೆ.