ನಿಮ್ಮ ಸುಳ್ಳಿಗೆ ಜನರು ಮರುಳಾಗಲ್ಲ: ಪ್ರಧಾನಿ ಮೋದಿಗೆ ಖರ್ಗೆ ಪತ್ರ
ಪ್ರತಿಯೊಬ್ಬ ಭಾರತೀಯ ಕೂಡ ನಮ್ಮ ಮತಬ್ಯಾಂಕ್. ಅದು ಬಡವರು, ತುಳಿತಕ್ಕೆ ಒಳಗಾದವರು, ಮಹಿಳೆಯರು, ಮಹತ್ವಾಕಾಂಕ್ಷಿ ಯುವಕರು, ಕಾರ್ಮಿಕ ವರ್ಗ, ದಲಿತರು ಮತ್ತು ಆದಿವಾಸಿಗಳು- ಹೀಗೆ ಯಾರೇ ಆಗಿರಬಹುದು’ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಟಿಐ ನವದೆಹಲಿ (ಮೇ.3) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಚುನಾವಣೆ ಮುಗಿದ ನಂತರ ಜನರು ಮೋದಿ ಅವರನ್ನು ‘ಸೋಲು ತಪ್ಪಿಸಿಕೊಳ್ಳಲು ಸುಳ್ಳಿನಿಂದ ತುಂಬಿದ, ಒಡೆದು ಆಳುವ ಮತ್ತು ಕೋಮುವಾದಿ ಭಾಷಣ ಮಾಡುತ್ತಿದ್ದ ಪ್ರಧಾನಿ ಎಂದು ಮಾತ್ರ ನೆನಪಿಸಿಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೆ, ‘ದ್ವೇಷ ಭಾಷಣ’ಗಳಲ್ಲಿ ತೊಡಗಿಸಿಕೊಳ್ಳುವ ಬದಲು ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರದ ಸಾಧನೆಯ ಬಗ್ಗೆ ಮತ ಕೇಳುವಂತೆ ಪ್ರಧಾನಿಯನ್ನು ಖರ್ಗೆ ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆಯ 2ನೇ ಹಂತ(Lok sabha election 2024 phase 2) ದ ನಂತರ ಎನ್‌ಡಿಎ ಅಭ್ಯರ್ಥಿ(NDA Candiddates)ಗಳಿಗೆ ಪ್ರಧಾನಿ(PM Modi) ವೈಯಕ್ತಿಕವಾಗಿ ಪತ್ರ ಬರೆದು, ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಂವಿಧಾನಿಕವಾಗಿದ್ದರೂ ಸಹ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಅದನ್ನು ಜಾರಿಗೊಳಿಸುತ್ತಿವೆ. ಎಸ್ಸಿ ಎಸ್ಟಿ ಮೀಸಲನ್ನು ಕಿತ್ತುಕೊಂಡು ಮತಬ್ಯಾಂಕ್ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರಿಗೆ ನೀಡಲು ಸಂಚು ರೂಪಿಸಿವೆ. ಈ ಬಗ್ಗೆ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದ್ದರು.
ಮುಸ್ಲಿಂ ಮೀಸಲಾತಿಗಾಗಿ ಕರ್ನಾಟಕ ಕಾಂಗ್ರೆಸ್ ಫತ್ವಾ: ಪ್ರಧಾನಿ ಮೋದಿ ಕಿಡಿ
ಈ ಸಂಬಂಧ ಖರ್ಗೆ ಅವರು ಖುದ್ದು ಮೋದಿಗೆ ಪತ್ರ ಬರೆದು ಈ ಮೇಲ್ಕಾಣಿಸಿದ ವಿಷಯಗಳಲ್ಲದೆ, ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದ್ದು, ‘ಪ್ರತಿಯೊಬ್ಬ ಭಾರತೀಯ ಕೂಡ ನಮ್ಮ ಮತಬ್ಯಾಂಕ್. ಅದು ಬಡವರು, ತುಳಿತಕ್ಕೆ ಒಳಗಾದವರು, ಮಹಿಳೆಯರು, ಮಹತ್ವಾಕಾಂಕ್ಷಿ ಯುವಕರು, ಕಾರ್ಮಿಕ ವರ್ಗ, ದಲಿತರು ಮತ್ತು ಆದಿವಾಸಿಗಳು- ಹೀಗೆ ಯಾರೇ ಆಗಿರಬಹುದು’ ಎಂದು ಕುಟುಕಿದ್ದಾರೆ. ಅಲ್ಲದೆ, ‘1947ರಿಂದ ಪ್ರತಿ ಹಂತದಲ್ಲೂ ಮೀಸಲಾತಿಯನ್ನು ವಿರೋಧಿಸಿದವರು ಯಾರು ಎಂದು ಎಲ್ಲರಿಗೂ ತಿಳಿದಿದೆ’ ಎಂದು ಬಿಜೆಪಿಗೆ ಚಾಟಿ ಬೀಸಿದ್ದಾರೆ.
‘ಎಲ್ಲ ಎನ್‌ಡಿಎ ಅಭ್ಯರ್ಥಿಗಳಿಗೆ ಮತದಾರರಿಗೆ ಏನು ತಿಳಿಸಬೇಕು ಎಂದು ನೀವು ಬರೆದಿರುವ ಪತ್ರವನ್ನು ನಾನು ನೋಡಿದ್ದೇನೆ. ಪತ್ರದ ಧ್ವನಿ ಮತ್ತು ವಿಷಯದಿಂದ ಬಹಳಷ್ಟು ಹತಾಶೆ ಮತ್ತು ಆತಂಕವಿದೆ ಎಂದು ತೋರುತ್ತದೆ. ಪ್ರಧಾನಿ ಹುದ್ದೆಗೆ ಹೊಂದಿಕೆಯಾಗದ ಭಾಷಾ ಬಳಕೆ ಅದರಲ್ಲಿದೆ. ಈ ಪತ್ರವು ನಿಮ್ಮ ಭಾಷಣಗಳಲ್ಲಿನ ಸುಳ್ಳುಗಳು ನೀವು ಉದ್ದೇಶಿಸಿರುವ ಪರಿಣಾಮ ಬೀರಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ನೀವು ಸುಳ್ಳನ್ನೇ ಸತ್ಯ ಮಾಡಲು ಯತ್ನಿಸುತ್ತಿದ್ದೀರಿ. ಆದರೆ ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಎಂದಿಗೂ ಸತ್ಯವಾಗುವುದಿಲ್ಲ’ ಎಂದು ಮೋದಿಗೆ ಖರ್ಗೆ ತಿವಿದಿದ್ದಾರೆ.
‘ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಏನಿದೆ ಎಂಬುದನ್ನು ಸ್ವತಃ ಮತದಾರರು ಓದಿ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ. ನಮ್ಮ ಗ್ಯಾರಂಟಿಗಳು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ. ನಾವು ಅದನ್ನು ಅವರಿಗೆ ವಿವರಿಸಬೇಕಾಗಿಲ್ಲ. ಆದರೂ ನಿಮ್ಮ ಅನುಕೂಲಕ್ಕಾಗಿ, ನಾನು ಅವುಗಳನ್ನು ಇಲ್ಲಿ ಪುನರುಚ್ಚರಿಸುತ್ತೇನೆ’ ಎಂದಿರುವ ಖರ್ಗೆ, ಪಕ್ಷದ ಯುವ ನ್ಯಾಯ್, ನಾರಿ ನ್ಯಾಯ್, ಕಿಸಾನ್ ನ್ಯಾಯ್, ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ಗ್ಯಾರಂಟಿಗಳ ಬಗ್ಗೆ ವಿವರಿಸಿದ್ದಾರೆ.
‘ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ನೀವು ಮತ್ತು ಗೃಹ ಸಚಿವರು ಹೇಳುವುದನ್ನು ನಾವು ಕೇಳಿದ್ದೇವೆ, ಕಳೆದ 10 ವರ್ಷಗಳಲ್ಲಿ ನಾವು ನೋಡುತ್ತಿರುವ ಏಕೈಕ ತುಷ್ಟೀಕರಣ ನೀತಿ ಎಂದರೆ ನೀವು ಮತ್ತು ನಿಮ್ಮ ಮಂತ್ರಿಗಳು ಚೀನಾವನ್ನು ಓಲೈಸುವುದು’ ಎಂದು ಖರ್ಗೆ ಟೀಕಿಸಿದ್ದಾರೆ.
‘ಕಾಂಗ್ರೆಸ್ ಮೀಸಲು ಬದಲಿಸಲು ಯತ್ನಿಸುತ್ತಿದೆ ಎಂದಿದ್ದೀರಿ. ಆದರೆ ಸಂವಿಧಾನದ 16 ನೇ ವಿಧಿ ಪ್ರಕಾರ ಜನಸಂಖ್ಯೆಯ ಆಧಾರದ ಮೇಲೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡುವ ಮೀಸಲಾತಿಯನ್ನು ನೀವು ಏಕೆ ವಿರೋಧಿಸುತ್ತೀರಿ? ಸ್ಪಷ್ಟಪಡಿಸಿ’ ಎಂದು ಕಾಂಗ್ರೆಸ್ ಅಧ್ಯಕ್ಷ ಕೇಳಿದ್ದಾರೆ.
ರಾಹುಲ್ ಗಾಂಧಿ ಪಿಎಂ ಆಗಲೆಂದು ಪಾಕಿಸ್ತಾನ ಬಯಕೆ: ಪ್ರಧಾನಿ ಮೋದಿ
‘ನಿಮ್ಮ ಪತ್ರದಲ್ಲಿ ಜನರ ಕಷ್ಟಪಟ್ಟು ದುಡಿದ ಹಣವನ್ನು ಕಾಂಗ್ರೆಸ್ ಕಸಿದುಕೊಳ್ಳಲಿದೆ ಎಂದಿದ್ದೀರಿ. ಆದರೆ ಗುಜರಾತ್‌ನಲ್ಲಿ ಬಡ ದಲಿತ ರೈತರಿಂದ ವಂಚಿಸಿದ 10 ಕೋಟಿ ರು.ಗಳನ್ನು ಹಿಂದಿರುಗಿಸಲು ನಿಮ್ಮ ಪಕ್ಷಕ್ಕೆ ನಿರ್ದೇಶನ ನೀಡುವಂತೆ ನಾನು ಈ ಸಂದರ್ಭದಲ್ಲಿ ವಿನಂತಿಸುತ್ತೇನೆ. ಏಕೆಂದರೆ ಅದೇ ಹಣವನ್ನು ಬಿಜೆಪಿಗೆ ಚುನಾವಣಾ ಬಾಂಡ್ ಆಗಿ ನೀಡಲಾಗಿದೆ. ಅಕ್ರಮ ಮತ್ತು ಅಸಾಂವಿಧಾನಿಕ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ಬಿಜೆಪಿ 8,250 ಕೋಟಿ ರು. ಸಂಗ್ರಹಿಸಿದೆ’ ಎಂದು ಕಿಡಿಕಾರಿದ್ದಾರೆ.
‘ನಿಮ್ಮದೇ ಬಿಜೆಪಿಯ ಮಾಜಿ ಹಣಕಾಸು ಸಚಿವರು ಮತ್ತು ಬಿಜೆಪಿ ಪಕ್ಷದ ನಾಯಕರು ಪಿತ್ರಾರ್ಜಿತ ತೆರಿಗೆ ಬೇಕು ಎಂದು ಪದೇ ಪದೇ ಪ್ರಸ್ತಾಪಿಸಿದ್ದರು. ಆದರೂ ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ತರಲು ಬಯಸುತ್ತದೆ ಎಂದು ನೀವು ಸುಳ್ಳು ಹೇಳುತ್ತಿದ್ದೀರಿ’ ಎಂದು ಮೋದಿಗೆ ಖರ್ಗೆ ಪ್ರಹಾರ ಮಾಡಿದ್ದಾರೆ.