Asianet Suvarna News Asianet Suvarna News

ಕೆ.ಎಸ್‌.ಈಶ್ವರಪ್ಪ ಟೀಕೆಗೆ ಮತಗಳಿಂದ ಉತ್ತರಿಸಿ: ಜನತೆಗೆ ರಾಘವೇಂದ್ರ ಕರೆ

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ನನ್ನ ಮತ್ತು ಕುಟುಂಬದ ಬಗ್ಗೆ ವೈಯಕ್ತಿಕ ಟೀಕೆ ನಡೆಸಿ ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹವರ ಟೀಕೆಗಳಿಗೆ ಮತಗಳಿಂದ ಉತ್ತರ ನೀಡಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

Lok Sabha Election 2024 MP BY Raghavendra Slams On KS Eshwarappa gvd
Author
First Published Apr 15, 2024, 4:42 PM IST

ಬೆಂಗಳೂರು (ಏ.15): ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ನನ್ನ ಮತ್ತು ಕುಟುಂಬದ ಬಗ್ಗೆ ವೈಯಕ್ತಿಕ ಟೀಕೆ ನಡೆಸಿ ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹವರ ಟೀಕೆಗಳಿಗೆ ಮತಗಳಿಂದ ಉತ್ತರ ನೀಡಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ನಗರದಲ್ಲಿ ನೆಲೆಸಿರುವ ‘ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಧುಗಳೊಂದಿಗೆ ಸಮ್ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಏನೇ ಹೇಳಲಿ ನಾನು ಅದು ಅವರ ಆಶೀರ್ವಾದ ಎಂದು ತೆಗೆದುಕೊಳ್ಳುತ್ತೇನೆ. ಅವರು ಹಿರಿಯರಿದ್ದಾರೆ. ಆದರೆ ಯಡಿಯೂರಪ್ಪನವರ ಕುಟುಂಬದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ನಾನೂ ಪತ್ರಿಕಾಗೋಷ್ಠಿ ನಡೆಸಬಹುದು, ಒಂದು ಗಂಟೆ ಮಾತನಾಡಬಹುದು. ಆದರೆ ಇದನ್ನು ನಾನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Lok Sabha Election 2024: ಕಾಂಗ್ರೆಸ್ ಪಕ್ಷ ಗೆದ್ದರೇ ಪ್ರಜಾಪ್ರಭುತ್ವ ಗೆದ್ದಂತೆ: ಸಚಿವ ಎಚ್.ಕೆ.ಪಾಟೀಲ್

ಹಿಂದುತ್ವದ ಬಗ್ಗೆ ಈಶ್ವರಪ್ಪ ಮಾತನಾಡಿದ್ದಾರೆ. ಯಡಿಯೂರಪ್ಪ ಅವರಿಗಿಂತ ಹಿಂದುತ್ವದ ನಾಯಕ ಬೇಕಾ? ಹುಬ್ಬಳ್ಳಿ ಈದ್ಗಾ ಮೈದಾನದ ಹೋರಾಟದಲ್ಲಿ ಯಡಿಯೂರಪ್ಪ ಭಾಗಿಯಾಗಿರಲಿಲ್ಲವೇ? ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಿಕೊಂಡು ಪ್ರಚಾರ ನಡೆಸುವ ಈಶ್ವರಪ್ಪ ಅವರ ರಾಜಕೀಯ ಕೈಗೂಡುವುದಿಲ್ಲ. ನನ್ನ ಮತ್ತು ಕುಟುಂಬದ ಬಗ್ಗೆ ವೈಯಕ್ತಿಕ ಟೀಕೆ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕರಾದ ಗುರುರಾಜ್ ಗಂಟಿಹೊಳೆ, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಕೆ.ಬಿ.ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.

ಗ್ಯಾರೆಂಟಿ ಮೂಲಕ ಮಣ್ಣೆರಚುವ ತಂತ್ರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿಗಳ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಶೂನ್ಯವಾಗಿದೆ. ನಾವು ಸಾಧನೆಯ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಶಿವಮೊಗ್ಗದಲ್ಲಿ ರಾಘವೇಂದ್ರ ಅವರು ತಂದೆ ಯಡಿಯೂರಪ್ಪ ಅವರಿಗಿಂತ ಹತ್ತು ಪಟ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.

ಈಶ್ವರಪ್ಪರ ಬಂಡಾಯ ವಿಚಾರ ತಲೆಕೆಡಿಸಿಕೊಂಡಿಲ್ಲ: ಸಂಸದ ಬಿ.ವೈ.ರಾಘವೇಂದ್ರ

ಅಂಬೇಡ್ಕರ್ ಜಯಂತಿ ದಿನಾಚರಣೆಯಂದೇ ನಮ್ಮ‌ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ರಾಮ ಮಂದಿರ ನಿರ್ಮಿಸಬೇಕು ಎಂಬ 400 ವರ್ಷದ ಕನಸನ್ನು ನನಸು ಮಾಡಿದ್ದು ಮೋದಿಯವರು.
-ಬಿ.ವೈ.ರಾಘವೇಂದ್ರ, ಎನ್‌ಡಿಎ ಅಭ್ಯರ್ಥಿ.

Follow Us:
Download App:
  • android
  • ios