ಶೃಂಗೇರಿಯಲ್ಲಿ ‘ಬಿ’ ಫಾರಂಗೆ ಪೂಜೆ ಮಾಡಿಸಿದ ಎಚ್.ಡಿ.ರೇವಣ್ಣ
ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಅವರ ‘ಬಿ’ ಫಾರಂಗೆ ಶೃಂಗೇರಿಯ ದೇಗುಲಗಳಲ್ಲಿ ಮಂಗಳವಾರ ಸಂಜೆ ಪೂಜೆ ಮಾಡಿಸಿದರು.
ಶೃಂಗೇರಿ (ಮಾ.27): ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಅವರ ‘ಬಿ’ ಫಾರಂಗೆ ಶೃಂಗೇರಿಯ ದೇಗುಲಗಳಲ್ಲಿ ಮಂಗಳವಾರ ಸಂಜೆ ಪೂಜೆ ಮಾಡಿಸಿದರು. ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಫೈನಲ್ ಆಗುತ್ತಿದ್ದಂತೆ ಎಚ್.ಡಿ.ರೇವಣ್ಣ ಅವರು ಸಂಜೆ ‘ಬಿ’ ಫಾರಂ ಸಹಿತ ಶ್ರೀ ಕ್ಷೇತ್ರ ಶೃಂಗೇರಿಗೆ ಒಬ್ಬರೇ ಆಗಮಿಸಿದರು. ಶಾರದಾಂಬೆ ಹಾಗೂ ತೋರಣ ಗಣಪತಿಯ ಸನ್ನಿಧಿಯಲ್ಲಿ ‘ಬಿ’ ಫಾರಂ ಇರಿಸಿ, ಪೂಜೆ ಮಾಡಿಸಿಕೊಂಡು ವಾಪಸ್ ತೆರಳಿದರು. ಪ್ರಜ್ವಲ್ ರೇವಣ್ಣ ಅವರು ಎರಡನೇ ಬಾರಿಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ನನ್ನ ಪರ ಪ್ರಚಾರಕ್ಕೆ ಬನ್ನಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿಯಾಗಿ ಸಮಾಲೋಚನೆ ನಡೆಸಿದರು. ಡಾಲರ್ಸ್ ಕಾಲೋನಿಯಲ್ಲಿನ ನಿವಾಸದಲ್ಲಿ ಭೇಟಿಯಾಗಿ ಹಾಸನ ಲೋಕಸಭಾ ಕ್ಷೇತ್ರದ ರಾಜಕೀಯ ಕುರಿತು ಚರ್ಚೆ ನಡೆಸಿದರು.
ಚುನಾವಣಾ ಪ್ರಚಾರದ ವೇಳೆ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಪರ ಪ್ರಚಾರ ಮಾಡಬೇಕು ಎಂದು ಪ್ರಜ್ವಲ್ ರೇವಣ್ಣ ಮನವಿ ಮಾಡಿದರು. ಅಲ್ಲದೇ, ಮೈತ್ರಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗೆಲುವಿಗೆ ಸಹಕಾರ ನೀಡಬೇಕು ಎಂದು ಕೋರಿದರು ಎನ್ನಲಾಗಿದೆ. ಇದೇ ವೇಳೆ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಅವರು ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆಯೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಗಮನಕ್ಕೆ ತಂದರು.
Lok Sabha Election 2024: ಮಂಡ್ಯ ಬಿಜೆಪಿಗ ಕೆ.ಸಿ.ನಾರಾಯಣಗೌಡ ಮನವೊಲಿಸಿದ ವಿಜಯೇಂದ್ರ!
ಹಾಸನ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಜಂಟಿ ಸಭೆ ನಡೆಸಿ ಪಕ್ಷದ ಕಾರ್ಯಕರ್ತರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ದೂರ ಮಾಡಬೇಕು ಎಂಬುದರ ಕುರಿತು ಸಹ ಮಾತುಕತೆ ನಡೆಸಲಾಗಿದೆ. ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇವಣ್ಣ, ಹಾಸನ ಕ್ಷೇತ್ರದಲ್ಲಿ ಸಹಕಾರ ನೀಡುವ ಕುರಿತು ಚರ್ಚಿಸಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ ಎಂದರು.