ಬೆಂ.ಗ್ರಾ.ದಲ್ಲಿ ಡಿ.ಕೆ.ಬ್ರದರ್ಸ್‌ರಿಂದ ಕುಕ್ಕರ್ ಹಂಚಿಕೆ: ಕುಮಾರಸ್ವಾಮಿ ಗಂಭೀರ ಆರೋಪ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸಹೋದರರಿಂದ ಚುನಾವಣಾ ಅಕ್ರಮಗಳು ಅವ್ಯಾಹತ ವಾಗಿ ನಡೆಯುತ್ತಿದ್ದು, ತಕ್ಷಣವೇ ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗವು ಅರೆಸೇನಾ ಪಡೆ ತುಕಡಿಯನ್ನು ನಿಯೋಜಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು (ಮಾ.20): ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸಹೋದರರಿಂದ ಚುನಾವಣಾ ಅಕ್ರಮಗಳು ಅವ್ಯಾಹತ ವಾಗಿ ನಡೆಯುತ್ತಿದ್ದು, ತಕ್ಷಣವೇ ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗವು ಅರೆಸೇನಾ ಪಡೆ ತುಕಡಿಯನ್ನು ನಿಯೋಜಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇದೇ ವೇಳೆ ಪಾರದರ್ಶಕ ಚುನಾವಣೆ ನಡೆಯಲು ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ತಕ್ಷಣ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಕುಕ್ಕರ್‌ಗಳ ಲೋಡ್ ಇದ್ದ ಲಾರಿಗಳ ಚಿತ್ರಗಳು, ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ಒಂದು ಹಂತದಲ್ಲಿ ಸೀರೆಗಳನ್ನು ಹಂಚಿಕೆ ಮಾಡಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾದ ಮೇಲೂ ಹಂಚಿಕೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಕೇಂದ್ರ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಕುಕ್ಕರ್‌ಗಳನ್ನು ಎಲ್ಲೆಲ್ಲಿ ಅಡಗಿಸಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಬೆಂಕಿ ಹಚ್ಚಿ ಎಂದು ನಮ್ಮ ಕಾರ್ಯಕರ್ತರಿಗೆ ಕರೆ ಕೋಡಬೇಕಾಗುತ್ತದೆ. ಆಮೇಲೆ ಕಾರ್ಯಕರ್ತರ ಮೇಲೆ ಈ ಅಧಿಕಾರಿಗಳು ಕೇಸ್ ದಾಖಲಿಸಲಿ ನೋಡೋಣ ಎಂದು ಎಚ್ಚರಿಕೆ ನೀಡಿದರು.
ಆಯೋಗದ ವಿರುದ್ಧ ಕಿಡಿ: ರಾಜ್ಯದಲ್ಲಿ ಕೇಂದ್ರ ಚುನಾ ವಣಾ ಆಯೋಗ ಇದೆಯಾ? ಚುನಾವಣೆ ಘೋಷಣೆಯಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಏನುನಡೆಯುತ್ತಿದೆ ಎನ್ನುವುದುಆಯೋಗಕ್ಕೆಗೊತ್ತಿಲ್ಲವೇ? ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ಮಿತಿಮೀರಿವೆ. ಕುಕ್ಕರ್‌ಮತ್ತು ಹಣವನ್ನು ಅವ್ಯಾಹತವಾಗಿ ಹಂಚಲಾಗುತ್ತಿದೆ. ಮರಳವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಮತದಾರರಿಗೆ ಹಂಚಲು ಇರಿಸಿದ್ದ ಕುಕ್ಕರ್‌ಗಳನ್ನು ಲೋಡ್ ಮಾಡಲಾಗಿದ್ದ ಎರಡು ಲಾರಿಗಳನ್ನು ಜೆಡಿಎಸ್ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಇಂದು ಅಧಿಕೃತ ಚಾಲನೆ: ಮೊದಲ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ
ದೇಶದಲ್ಲಿ ಇಂತಹ ಅಕ್ರಮ ಎಲ್ಲೇ ನಡೆದರೂ ಅದರ ವಿಡಿಯೋ ಅಥವಾ ಫೋಟೋ ಕಳಿಸಿದರೆ ಕೇವಲ ನೂರು ನಿಮಿಷದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಮೂರು ಗಂಟೆಗಳ ಮಾಧ್ಯಮಗೋಷ್ಠಿ ಯಲ್ಲಿ ಹೇಳಿದ್ದರು. ಈ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿ 48 ಗಂಟೆ ಕಳೆದಿದೆ. ಇನ್ನೂ ಕ್ರಮ ಆಗಿಲ್ಲ ಯಾಕೆ ಆಗಿಲ್ಲ ಎಂದು ಕಿಡಿಕಾರಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೆ ಹಾರಿಕೆ ಉತ್ತರ ನೀಡುತ್ತಾರೆ. ಅಕ್ರಮಗಳಿಗೆ ಕಡಿವಾಣ ಹಾಕಲು ಕೂಡಲೇ ಆಯೋಗವು ಕ್ಷೇತ್ರದಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಬೇಕೆಂದು ಆಗ್ರಹಿಸಿದರು.