ಇವತ್ತಿನವರೆಗೂ ಮೋದಿ ರೈತರು ಯಾಕೆ ಸತ್ತರು ಅಂತಾ ಕೇಳಿಲ್ಲ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
10 ವರ್ಷದಲ್ಲಿ ಮೋದಿ ಸರ್ಕಾರ ಏನು ಕಾರ್ಯಕ್ರಮ ಮಾಡಿದೆ ಹೇಳಲಿ. ಮಹಿಳೆಯರಿಗಾಗಿ, ರೈತರಿಗಾಗಿ, ವಿದ್ಯಾರ್ಥಿಗಳಿಗಾಗಲೀ ಒಂದೇ ಒಂದು ಕಾರ್ಯಕ್ರಮ ಮಾಡಿದ್ರೆ ಹೇಳಲಿ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹೊನ್ನಾವರದಲ್ಲಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಕಾರವಾರ (ಏ.14): 10 ವರ್ಷದಲ್ಲಿ ಮೋದಿ ಸರ್ಕಾರ ಏನು ಕಾರ್ಯಕ್ರಮ ಮಾಡಿದೆ ಹೇಳಲಿ. ಮಹಿಳೆಯರಿಗಾಗಿ, ರೈತರಿಗಾಗಿ, ವಿದ್ಯಾರ್ಥಿಗಳಿಗಾಗಲೀ ಒಂದೇ ಒಂದು ಕಾರ್ಯಕ್ರಮ ಮಾಡಿದ್ರೆ ಹೇಳಲಿ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹೊನ್ನಾವರದಲ್ಲಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವರ್ಷ ತಮ್ಮ ಹಕ್ಕಿಗಾಗಿ ಹೋರಾಡಿ ದೆಹಲಿ ಗಡಿಯಲ್ಲಿ 7 ಮಂದಿ ರೈತರು ಪ್ರಾಣ ಕಳೆದುಕೊಂಡರು. ಇವತ್ತಿನವರೆಗೂ ನರೇಂದ್ರ ಮೋದಿಯವರು ರೈತರು ಯಾಕೆ ಸತ್ತರು ಅಂತಾ ಕೇಳಿಲ್ಲ ಎಂದು ಪ್ರಶ್ನಿಸಿದರು.
ಮಣಿಪುರದಲ್ಲಿ 160 ಮಂದಿ ವಿನಾಕಾರಣ ಸತ್ತಿದ್ದಾರೆ, ಇವತ್ತಿನವರೆಗೂ ಅದನ್ನು ವಿಚಾರಿಸಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಆದರೂ ಅದನ್ನೂ ಕೇಳಿಲ್ಲ. ಎಲ್ಲವನ್ನೂ ಬದಿಗೊತ್ತುವಂತಹ ಪ್ರಯತ್ನವನ್ನು ನರೇಂದ್ರ ಮೋದಿ, ಬಿಜೆಪಿಯವರು ಮಾಡ್ತಿದ್ದಾರೆ. ಉತ್ತರ ಕನ್ನಡದ ಜನ ಪ್ರಬುದ್ಧರಿದ್ದೀರಿ, ಯೋಚಿಸಿ ಮತ ಹಾಕಿ, ಯಾವ ಸರ್ಕಾರ ಈ ದೇಶಕ್ಕೆ, ಸಮಾಜಕ್ಕೆ, ಕುಟುಂಬಕ್ಕೆ ಒಳ್ಳೆಯದನ್ನು ಮಾಡಿದೆ ಅದಕ್ಕೆ ಮತ ಹಾಕಿ. ಜಾತಿ, ಧರ್ಮ, ಭಾಷೆ ಮೇಲೆ ಚುನಾವಣೆಯಾಗಬಾರದು ಎಂದು ಕಾರ್ಯಕರ್ತರು, ಮತದಾರರಿಗೆ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮನವಿ ಮಾಡಿದರು.
ಎಸ್‌ಡಿಪಿಐ ಬೆಂಬಲವನ್ನು ಕೇಳಿಲ್ಲ, ಅವರಾಗೇ ಕೊಟ್ಟರು: ಕೇರಳದಲ್ಲಿ ನಾವು ಎಸ್‌ಡಿಪಿಐ ಬೆಂಬಲ ಕೋರಿಲ್ಲ. ಅವರೇ ಕೊಟ್ಟರೆ ನಾವೇನೂ ಮಾಡಲಾಗಲ್ಲ. ಅವರ ಪಕ್ಷದ ತೀರ್ಮಾನದ ಪ್ರಕಾರ ಕೋಮುವಾದಿ ಪಕ್ಷವನ್ನು ಸೋಲಿಸಲು ಬೆಂಬಲ ಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಕೋಮುವಾದಿ ಪಕ್ಷವನ್ನು ಸೋಲಿಸಲು ಅವರು ಬೆಂಬಲ ಕೊಟ್ಟಿದ್ದಾರೆ. ಆದರೆ ಅವರಿಗೆ ಬೆಂಬಲ ಕೊಡುವಂತೆ ನಾವು ಕೇಳಿಲ್ಲ. ಹೀಗಾಗಿ ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿದರು.
ಮೋದಿ ಅವರೇ ನೀವು 10 ವರ್ಷದಲ್ಲಿ ಮಾಡಿದ ಕರ್ಮಕಾಂಡ ಜನರ ಮುಂದೆ ಹೇಳಿ: ಸಚಿವ ಸಂತೋಷ್ ಲಾಡ್
ಎಸ್‌ಡಿಪಿಐ ಕೂಡ ಕೋಮುವಾದಿ ಸಿದ್ಧಾಂತ ಹೊಂದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಅವರ ಬೆಂಬಲ ಕೋರಿಲ್ಲ. ಬಿಜೆಪಿ ಜಮ್ಮು- ಕಾಶ್ಮೀರದಲ್ಲಿ ಪಿಡಿಪಿ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸಿತ್ತು. ಕಾಶ್ಮೀರದಲ್ಲಿ ಚುನಾವಣೆ ಬಳಿಕ ಪಿಡಿಪಿ ಪಾಕಿಸ್ತಾನಕ್ಕೆ ಧನ್ಯವಾದ ಹೇಳಿತ್ತು. ಅದೇ ಪಕ್ಷದ ಜತೆ ಬಿಜೆಪಿ ಎರಡು ವರ್ಷ ಸರ್ಕಾರ ನಡೆಸಿತ್ತು. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ತಿರುಗೇಟು ನೀಡಿದರು. ಬಿಜೆಪಿ ಸದಸ್ಯರು ಗೋಡ್ಸೆ ಮಂದಿರ ಕಟ್ಟಬೇಕು ಎನ್ನುತ್ತಾರೆ. ಮಹಾತ್ಮ ಗಾಂಧಿ ಪುತ್ಥಳಿ ಮಾಡಿ ಅದಕ್ಕೆ ಗುಂಡು ಹಾರಿಸುತ್ತಾರೆ. ಇಂತಹವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಹಾಗೂ ಸಂವಿಧಾನ ರಕ್ಷಣೆ ಮಾಡುವ ನಮ್ಮ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಹೇಳಿದರು.