ಬಿಜೆಪಿ, ಜೆಡಿಎಸ್‌ನಿಂದ ಲೋಕಸಭೆ ಅಭ್ಯರ್ಥಿ ನಿರ್ಧಾರ: ಸಂಸದ ಪ್ರಜ್ವಲ್ ರೇವಣ್ಣ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವುದನ್ನು ಬಿಜೆಪಿಯ ವರಿಷ್ಠರು ಹಾಗೂ ಜೆಡಿಎಸ್ ನಾಯಕರು ಕುಳಿತು ನಿರ್ಧಾರ ಮಾಡುತ್ತಾರೆ. ಸದ್ಯದಲ್ಲೇ ಸಿಹಿ ಸುದ್ದಿ ಬರಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಶಾಸಕ ಪ್ರೀತಂ ಗೌಡರ ಹೇಳಿಕೆಗೆ ತಿರುಗೇಟು ನೀಡಿದರು.
ಹಾಸನ (ಫೆ.07): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವುದನ್ನು ಬಿಜೆಪಿಯ ವರಿಷ್ಠರು ಹಾಗೂ ಜೆಡಿಎಸ್ ನಾಯಕರು ಕುಳಿತು ನಿರ್ಧಾರ ಮಾಡುತ್ತಾರೆ. ಸದ್ಯದಲ್ಲೇ ಸಿಹಿ ಸುದ್ದಿ ಬರಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಶಾಸಕ ಪ್ರೀತಂ ಗೌಡರ ಹೇಳಿಕೆಗೆ ತಿರುಗೇಟು ನೀಡಿದರು. ಅಲ್ಲದೆ ತಮಗೆ ಲೋಕಸಭೆ ಚುನಾವಣೆ ಟಿಕೆಟ್ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿರುವ ಸಂಸದರ ನಿವಾಸದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದರು.
ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಬಿಜೆಪಿಗೆ ಸಿಗಲಿದೆ ಎನ್ನುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾರೋ ಒಬ್ಬರು ಹೇಳ್ತಾರೆ. ಆದರೆ ಇದನ್ನೆಲ್ಲಾ ದೊಡ್ಡವರು ಕುಳಿತು ತೀರ್ಮಾನ ಮಾಡಲಿದ್ದಾರೆ. ಬಿಜೆಪಿಯ ಬಹುತೇಕ ಕಾರ್ಯಕರ್ತರು ಕೂಡ ನಮ್ಮ ಬೆಂಬಲಕ್ಕೆ ಇದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಎಲ್ಲರ ಮನಸ್ಸಿನಲ್ಲಿದೆ. ಇಲ್ಲಿ ಯಾವುದೇ ಕಾರ್ಯಕರ್ತರು, ಮುಖಂಡರಲ್ಲಿ ಗೊಂದಲವಿಲ್ಲ. ಅವರ ಮನಸ್ಸಿನಲ್ಲಿ ಇರೋದನ್ನು ಅವರವರು ಹೇಳಿಕೊಳ್ಳುತ್ತಾರೆ. ಅದು ತಪ್ಪು ಎಂದು ಭಾವಿಸುವುದಿಲ್ಲ’ ಎಂದು ಹೇಳಿದರು.
ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮವಾಗಿ ಘೋಷಣೆ: ಸಚಿವ ಈಶ್ವರ ಖಂಡ್ರೆ
ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗುತ್ತದೆ. ಬಿಜೆಪಿಯವರು ಎಲ್ಲಾ ಜಿಲ್ಲೆಗಳಿಗೂ ಹೋಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡುತ್ತಿದ್ದಾರೆ. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲೆಲ್ಲಿ ಸಭೆ ಮಾಡಬೇಕೆಂದು ತೀರ್ಮಾನ ಮಾಡಬೇಕು ಎಂದು ಪರೋಕ್ಷವಾಗಿ ಪ್ರೀತಂಗೌಡ ಹೇಳಿಕೆಗೆ ವ್ಯಂಗ್ಯವಾಡಿದರು.
ಕೇಸರಿ ಬಿಜೆಪಿಯದ್ದಲ್ಲ: ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಏಕೆ ಭಾವಿಸಬೇಕು? ಕೇಸರಿ ಶಾಲು ಹಾಕಿದವರೆಲ್ಲ ಬಿಜೆಪಿ ಕಾರ್ಯಕರ್ತರು ಎನ್ನಲು ಆಗುತ್ತದೆಯೇ? ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು. ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು ಎಂಬ ಎಚ್.ಡಿ. ದೇವೇಗೌಡರ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ‘ದೇಗುಲದ ಉದ್ಘಾಟನೆ ವೇಳೆ ನಮ್ಮ ಕಾರ್ಯಕರ್ತರೇ ಕೇಸರಿ ಶಾಲು ಹಾಕಿರುತ್ತಾರೆ. ಅದು ಧಾರ್ಮಿಕ ಸಂಕೇತ ಅಷ್ಟೇ. ಮಂಡ್ಯ ಪ್ರತಿಭಟನೆ ವೇಳೆಯಲ್ಲಿ ಕುಮಾರಸ್ವಾಮಿ ಅವರಿಗೆ ಯಾರೋ ಕಾರ್ಯಕರ್ತ ಬಂದು ಕೇಸರಿ ಶಾಲು ಹಾಕಿದ್ದರು. ಇದನ್ನು ತಪ್ಪಾಗಿ ತಿಳಿಯುವ ಅಗತ್ಯ ಇಲ್ಲ’ ಎಂದರು.
ತೆರಿಗೆದಾರರು ಪ್ರತಿಭಟನೆ: ಕಾಂಗ್ರೆಸ್‌ನ ‘ನಮ್ಮ ಹಕ್ಕು ನಮ್ಮ ತೆರಿಗೆ’ ಘೋಷಣೆಗೆ ತಿರುಗೇಟು ನೀಡಿದ ಪ್ರಜ್ವಲ್, ಜನರ ತೆರಿಗೆ ಹಣವನ್ನು ಇವರ ಉಚಿತ ಗ್ಯಾರಂಟಿಗೆ ಬಳಸಿದ್ದಾರಲ್ಲಾ, ಮುಂದೆ ತೆರಿಗೆ ಪಾವತಿದಾರರು ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ಹೋರಾಟ ಮಾಡಿದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.
ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ನಾವು ಸಿದ್ಧ: ಸಚಿವ ಸಂತೋಷ್ ಲಾಡ್
ಡಿ.ಕೆ.ಸುರೇಶ್‌ಗೆ ಶೋಭೆಯಲ್ಲ: ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಬಹುದು ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತ ಹೊಡೆಯುವ ಹೇಳಿಕೆ ಯಾರೂ ಕೊಡಬಾರದು. ಇದು ಯಾರಿಗೂ ಶೋಭೆ ತರುವುದಿಲ್ಲ. ಭಾರತ ಒಂದಾಗಿರುತ್ತದೆ, ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಡಿ ಕೆ ಸುರೇಶ್ ಹೇಳಿಕೆಗೆ ಸಂಸದ ಪ್ರಜ್ವಲ್ ತಿರುಗೇಟು ನೀಡಿದರು.