ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ದೊಡ್ಡ ಪಾರ್ಟ್ನರ್ ಸಮ್ಮಿಶ್ರ ಸರ್ಕಾರ ರಚಿಸುವ ಅವಶ್ಯಕತೆಯಿತ್ತು;ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ 

ಬೀದರ್: ಸಮ್ಮಿಶ್ರ ಸರ್ಕಾರದಲ್ಲಿ ಏನೇ ಒಳ್ಳೆ ಕೆಲಸ ಆದ್ರೂ ಅದರ ಶ್ರೇಯಸ್ಸು ನಮಗೆ ಸಲ್ಲಬೇಕು, ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ದೊಡ್ಡ ಪಾರ್ಟ್ನರ್ ನಾವಿದ್ದೇವೆ. ನಾವು ಡಬಲ್ ಸೀಟ್‌ಗಳನ್ನು ಹೊಂದಿದ್ದೇವೆ. ರೈತರ ಸಾಲಮನ್ನಾ ನಾವೇ ಮಾಡಿದ್ದೇವೆ ಅಂತ ಹೇಳಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. 

ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೀದರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಕಾರ್ಯಾಧ್ಯಕ್ಷರ ಅಭಿನಂದನಾ ಸಮಾರಂಭದ ಭಾಷಣ ವೇಳೆ ಈಶ್ವರ್ ಖಂಡ್ರೆ ಈ ಹೇಳಿಕೆ ನೀಡಿದ್ದಾರೆ.

ನಾವು 78 ಜನ ಶಾಸಕರಿದ್ದೇವೆ, ಅವರು 37 ಜನ ಶಾಸಕರಿದ್ದಾರೆ. ನಾವು ಅವರಿಗಿಂತ ಡಬಲ್ ಇದ್ದೀವಿ ಸರ್ಕಾರ ಮಾಡುವ ಅನಿವಾರ್ಯತೆ ಇತ್ತು, ಅವಶ್ಯಕತೆಯಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ಅದಕ್ಕೆ ಸಮ್ಮಿಶ್ರ ಧರ್ಮದ ಪಾಲನೆ ನಾವು ಮಾಡುತ್ತೇವೆ, ಎಂದು ಖಂಡ್ರೆ ಹೇಳಿದ್ದಾರೆ. 

ಪಕ್ಷ ಬಲವರ್ಧನೆ ಮಾಡುವುದು ದೊಡ್ಡ ಕೆಲಸ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಗುಂಪುಗಾರಿಕೆ ಇಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಮುಖ್ಯ ಗುರಿ ಎಂದು ಅವರು ಹೇಳಿದ್ದಾರೆ.