ಪಕ್ಷವು ಈಗಾಗಲೇ ಎರಡು ಹಂತಗಳಲ್ಲಿ ಈಗಾಗಲೇ 166 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು ಬಾಕಿ ಇರುವ 58 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಸಭೆ ನಡೆಯಿತು. ಈ ಪೈಕಿ ಸುಮಾರು 25 ಕ್ಷೇತ್ರಗಳಿಗೆ ಒಂಟಿ ಹೆಸರನ್ನು ತೀರ್ಮಾನಿಸಲಾಗಿದ್ದು, ಉಳಿದ ಕ್ಷೇತ್ರಗಳ ಬಗ್ಗೆ ತೀವ್ರ ಚರ್ಚೆ ನಡೆಯಿತು ಎನ್ನಲಾಗಿದೆ.
ಬೆಂಗಳೂರು(ಏ.11): ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪೈಕಿ ಬಾಕಿ ಉಳಿದಿರುವ 58 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಬಗ್ಗೆ ಎಐಸಿಸಿ ವರಿಷ್ಠರೊಂದಿಗೆ ದೆಹಲಿಯಲ್ಲಿ ಸೋಮವಾರ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದೀರ್ಘ ಮಾತುಕತೆ ನಡೆಸಿದರು. ಮೂಲಗಳ ಪ್ರಕಾರ ಇಂದು(ಮಂಗಳವಾರ) ಅಥವಾ ನಾಳೆ(ಬುಧವಾರ) ಸುಮಾರು 25 ಕ್ಷೇತ್ರಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು ಎನ್ನಲಾಗಿದೆ.
ಪಕ್ಷವು ಈಗಾಗಲೇ ಎರಡು ಹಂತಗಳಲ್ಲಿ ಈಗಾಗಲೇ 166 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು ಬಾಕಿ ಇರುವ 58 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಸಭೆ ನಡೆಯಿತು. ಈ ಪೈಕಿ ಸುಮಾರು 25 ಕ್ಷೇತ್ರಗಳಿಗೆ ಒಂಟಿ ಹೆಸರನ್ನು ತೀರ್ಮಾನಿಸಲಾಗಿದ್ದು, ಉಳಿದ ಕ್ಷೇತ್ರಗಳ ಬಗ್ಗೆ ತೀವ್ರ ಚರ್ಚೆ ನಡೆಯಿತು ಎನ್ನಲಾಗಿದೆ.
ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್, ಸ್ಕ್ರೀನಿಂಗ್ ಸಮಿತಿ ಅದ್ಯಕ್ಷ ಮೋಹನ್ ಪ್ರಕಾಶ್ ಅವರೊಂದಿಗೆ ಸಿದ್ದರಾಮಯ್ಯ, ಶಿವಕುಮಾರ್ ಅವರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಿದ್ಧಪಡಿಸಿರುವ ಸಂಭಾವ್ಯರ ಪಟ್ಟಿಯನ್ನು ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಪಟ್ಟಿಯಲ್ಲಿ ಬಹುತೇಕ ಗೊಂದಲಗಳು ಬಗೆಹರಿದಿದ್ದು ಯಾವಾಗ ಪಟ್ಟಿ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಬಿಜೆಪಿ ಪಟ್ಟಿಬಿಡುಗಡೆಯಾಗುವವರೆಗೆ ಕಾಯಬೇಕೆ ಅಥವಾ ಅದಕ್ಕೂ ಮೊದಲೇ ಪ್ರಕಟಿಸಬೇಕು ಎಂಬ ಬಗ್ಗೆ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ. ಇನ್ನು ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸ ಹಾಗೂ ಸತ್ಯಮೇವ ಜಯತೇ ಸತ್ಯಾಗ್ರಹ ಯಾತ್ರೆ ಕುರಿತೂ ಚರ್ಚಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
