Asianet Suvarna News Asianet Suvarna News

ಯಡಿಯೂರಪ್ಪ ಪದಚ್ಯುತಿ ವಿರುದ್ಧ ಲಿಂಗಾಯತ ಅಸ್ಮಿತೆ: ಕಾಂಗ್ರೆಸ್ ನಾಯಕರ ಬೆಂಬಲ!

* ಬಿಜೆಪಿ ಮಾತ್ರವಲ್ಲ, ಪ್ರತಿಪಕ್ಷಗಳ ಲಿಂಗಾಯತ ನಾಯಕರು, ಮಠಾಧೀಶರಿಂದಲೂ ಬೆಂಬಲ

* ಬಿಎಸ್‌ವೈ ಮನೆಗೇ ಹೋಗಿ ಬೆಂಬಲ ಸೂಚಿಸಿದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು

* ಬಿಎಸ್‌ವೈ ಪದಚ್ಯುತಿಗೊಳಿಸಿದರೆ ಲಿಂಗಾಯತರ ಅವಕೃಪೆ: ಮಾಜಿ ಸಚಿವ ಎಂ.ಬಿ.ಪಾಟೀಲ್‌

* ಸಿಎಂ ಬದಲಿಸಿದರೆ ಹೊಡೆತ: ರಂಭಾಪುರಿಶ್ರೀ

* ಗೌರವ ಕೊಡಿ: ಮುರುಘಾಶ್ರೀ, ಶ್ರೀಶೈಲಶ್ರೀ

Lingayat leaders support B S Yediyurappa amid exit talks pod
Author
Bangalore, First Published Jul 20, 2021, 7:29 AM IST

 ಬೆಂಗಳೂರು/ರಾಯಚೂರು(ಜು.20): ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವ ವದಂತಿಗಳು ದಟ್ಟವಾಗುತ್ತಿದ್ದಂತೆಯೇ ಲಿಂಗಾಯತ ಸಮುದಾಯ ಅವರ ಬೆನ್ನಿಗೆ ನಿಲ್ಲಲು ಮುಂದಾಗಿದೆ.

ಈವರೆಗೆ ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರು ಹಾಗೂ ಮುಖಂಡರು ಯಡಿಯೂರಪ್ಪ ಪರ ಧ್ವನಿ ಎತ್ತಿದ್ದರು. ಇದೀಗ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ಸಿನ ಅಗ್ರಗಣ್ಯ ಲಿಂಗಾಯತ ನಾಯಕರು ಹಾಗೂ ಸ್ವಾಮೀಜಿಗಳು ಯಡಿಯೂರಪ್ಪ ಅವರ ಪರವಾಗಿ ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ಮಠಾಧೀಶರಾದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ

ವೀರಸೋಮೇಶ್ವರ ಸ್ವಾಮೀಜಿ, ಶ್ರೀಶೈಲಪೀಠದ ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿ ಬಹಿರಂಗವಾಗಿ ಯಡಿಯೂರಪ್ಪ ಅವರ ಪರ ಮಾತಾಡಿದ್ದಾರೆ.

ಶಾಮನೂರು ಎಚ್ಚರಿಕೆ:

ಸೋಮವಾರ ಸಂಜೆ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಿಸಿದರೆ ಇತಿಹಾಸ ಮುಗಿಯಿತು ಎಂದರ್ಥ. ಇಡೀ ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಬೆನ್ನಿಗಿದೆ. ಅವರನ್ನು ಎತ್ತಂಗಡಿ ಮಾಡಿದರೆ ಹಿಂದಿನ ಇತಿಹಾಸ ಮರುಕಳಿಸಲಿದ್ದು, ಬದಲಿಸಲು ಹೋದವರು ನಿರ್ನಾಮವಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಇಡೀ ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಬೆನ್ನಿಗಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಇಲ್ಲದಿದ್ದರೆ, ಜೆ.ಎಚ್‌. ಪಟೇಲ್‌, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಎಸ್‌.ಆರ್‌. ಬೊಮ್ಮಾಯಿ ಬದಲಾವಣೆಯ ವೇಳೆಯಲ್ಲಿ ಆದ ಇತಿಹಾಸ ಮರುಕಳಿಸುತ್ತದೆ. ಬದಲಾವಣೆಗೆ ಕೈ ಹಾಕಿದರೆ ನಿರ್ನಾಮವಾಗುತ್ತಾರೆ ಎಂದು ಬಿಜೆಪಿಗೆ ಎಚ್ಚರಿಸಿದರು.

ಬಿಎಸ್‌ವೈ ಪ್ರಭಾವಿ ನಾಯಕ- ಎಂಬಿಪಾ:

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ಸಿನ ಮಾಜಿ ಸಚಿವ ಎಂ.ಬಿ.ಪಾಟೀಲ್‌, ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಹಾಗೂ ರಾಜ್ಯದ ಪ್ರಭಾವಿ ನಾಯಕರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರೇ ಪ್ರಮುಖ ಕಾರಣ. ಬಿಜೆಪಿಗೆ ಅವರು ನೀಡಿರುವ ಸೇವೆ, ಅವರ ವಯಸ್ಸು, ಅನುಭವ, ಘನತೆಗೆ ತಕ್ಕಂತೆ ನಡೆಸಿಕೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ ಎಂದು ತೀಕ್ಷ$್ಣವಾಗಿ ಹೇಳಿದರು.

ಕಳೆದ ಎರಡು ದಿನಗಳಿಂದ ಯಡಿಯೂರಪ್ಪ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಖೇದ ಉಂಟು ಮಾಡಿದೆ. ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ ಅವರನ್ನು ದುರ್ಬಲರು ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರ ಧ್ವನಿಯ ಆಡಿಯೋ ವೈರಲ್‌ ಮಾಡಿರುವುದು ಕೆಟ್ಟಅಭಿರುಚಿ ತೋರಿಸುತ್ತದೆ. ಇವೆಲ್ಲವೂ ವೈಯಕ್ತಿಕವಾಗಿ ನನಗೆ, ಸಮುದಾಯಕ್ಕೆ ನೋವು ಉಂಟು ಮಾಡಿವೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಬದಲಾವಣೆ ಅಥವಾ ಮುಂದುವರಿಕೆ ಬಿಜೆಪಿ ಆಂತರಿಕ ಅಭಿಪ್ರಾಯ. ಆದರೆ, ಯಡಿಯೂರಪ್ಪ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ನಾನು ವೈಯಕ್ತಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನನ್ನ ಹೇಳಿಕೆಗೂ ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ- ರಂಭಾಪುರಿ ಶ್ರೀ

ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಮುಂದುವರಿಯುವ ವಿಶ್ವಾಸವಿದೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡಿದರೆ ಬಿಜೆಪಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು, ಇಳಿ ವಯಸ್ಸಿನಲ್ಲೂ ಯಡಿಯೂರಪ್ಪ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ನಾಯಕತ್ವಕ್ಕೆ ಎಲ್ಲ ಜನಾಂಗದವರು ಬೆಂಬಲ ನೀಡಿದ್ದಾರೆ. ಬಿಎಸ್‌ವೈ ನಾಯಕತ್ವಕ್ಕೆ ಕೇವಲ ನಾವಷ್ಟೇ ಅಲ್ಲ ಸುತ್ತೂರು ಸ್ವಾಮಿಗಳು, ಆದಿಚುಂಚನಗಿರಿ ಶ್ರೀ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಅವಧಿರಪೂರ್ಣ ಅಧಿಕಾರಕ್ಕೆ ಅವಕಾಶ ಮಾಡಿಕೊಡಿ- ಶ್ರೀಶೈಲಶ್ರೀ

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಅವಧಿಪೂರ್ಣ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟು ಗೌರವಪೂರ್ಣವಾಗಿ ಬೀಳ್ಕೊಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ. ಶಿರಾಳಕೊಪ್ಪದಲ್ಲಿ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಪಕ್ಷವನ್ನು ಹಾಗೂ ವೀರಶೈವ ಸಮಾಜವನ್ನು ಗಟ್ಟಿಯಾಗಿ ಕಟ್ಟಿರುವ ಅವರನ್ನು ಕೇಂದ್ರದ ನಾಯಕರು ಅವಧಿಪೂರ್ಣ ಅಧಿಕಾರ ನಡೆಸಲು ಅನುವು ಮಾಡಿಕೊಡಬೇಕು. ಪಕ್ಷದಲ್ಲಿ ಕೆಲವರು ಅನವಶ್ಯಕವಾಗಿ ಅವರ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ನಷ್ಟ ಅನುಭವಿಸಬೇಕಾಗುತ್ತದೆ​-ಮುರುಘಾ ಶ್ರೀ:

ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿರುವ ವ್ಯಕ್ತಿಯಾಗಿದ್ದು ಅವರನ್ನು ಗೌರವದಿಂದ ನಡೆಸಿಕೊಳ್ಳುವುದು ಸೂಕ್ತ. ಇಂತಹ ಸಮಯದಲ್ಲಿ ಬದಲಾಯಿಸುವುದು ಸಮಂಜಸವಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಯಡಿಯೂರಪ್ಪ ಅವರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿರುವ ವ್ಯಕ್ತಿ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೇರ ನಡೆ, ಧೀರ ನುಡಿಗೆ ಹೆಸರಾದವರು. ರಾಜ್ಯಕ್ಕೆ ತಮ್ಮದೇ ಆದ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅಂಥ ಮೇಧಾವಿ-ಮುತ್ಸದ್ಧಿಯನ್ನು ಅಲಕ್ಷಿಸುವುದರಿಂದ ಮುಂದೆ ಭಾರೀ ನಷ್ಟಅನುಭವಿಸಬೇಕಾಗುತ್ತದೆ ಎಂದು ಮುರುಘಾ ಶರಣರು ಎಚ್ಚರಿಕೆ ನೀಡಿದ್ದಾರೆ.

ಸುತ್ತೂರು, ಚುಂಚನಗಿರಿ ಶ್ರೀಗಳಿಂದಲೂ ಬೆಂಬಲ

ಇಳಿ ವಯಸ್ಸಿನಲ್ಲೂ ಯಡಿಯೂರಪ್ಪ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ನಾಯಕತ್ವಕ್ಕೆ ಎಲ್ಲ ಜನಾಂಗದವರು ಬೆಂಬಲ ನೀಡಿದ್ದಾರೆ. ಯಡಿಯೂರಪ್ಪ ನಾಯಕತ್ವಕ್ಕೆ ಕೇವಲ ನಾವಷ್ಟೇ ಅಲ್ಲ, ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.

- ಡಾ.ವೀರಸೋಮೇಶ್ವರ ಸ್ವಾಮೀಜಿ, ರಂಭಾಪುರಿ ಪೀಠ

ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಿದರೆ ಇತಿಹಾಸ ಮುಗಿಯಿತು ಎಂದರ್ಥ. ಇಡೀ ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಬೆನ್ನಿಗಿದೆ. ಅವರನ್ನು ಎತ್ತಂಗಡಿ ಮಾಡಿದರೆ ಹಿಂದಿನ ಇತಿಹಾಸ ಮರುಕಳಿಸಲಿದ್ದು, ಬದಲಿಸಲು ಹೋದವರು ನಿರ್ನಾಮವಾಗುತ್ತಾರೆ.

-ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ

ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಹಾಗೂ ರಾಜ್ಯದ ಪ್ರಭಾವಿ ನಾಯಕರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರೇ ಪ್ರಮುಖ ಕಾರಣ. ಕಳೆದ ಎರಡು ದಿನಗಳಿಂದ ಯಡಿಯೂರಪ್ಪ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಖೇದ ಉಂಟು ಮಾಡಿದೆ. ಸಮುದಾಯಕ್ಕೆ ನೋವು ಉಂಟು ಮಾಡಿದೆ. ಘನತೆಗೆ ತಕ್ಕಂತೆ ನಡೆಸಿಕೊಳ್ಳದಿದ್ದರೆ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ.

-ಎಂ.ಬಿ.ಪಾಟೀಲ್‌, ಕಾಂಗ್ರೆಸ್ಸಿನ ಮಾಜಿ ಸಚಿವ

Follow Us:
Download App:
  • android
  • ios