ಕರಡಿ ಸಂಗಣ್ಣಗೆ ಕೊಪ್ಪಳ, ರಮೇಶ್ ಜಿಗಜಿಣಗಿಗೆ ನಾಗಠಾಣ ಟಿಕೆಟ್ ಬಗ್ಗೆ ಚರ್ಚೆ, ಟಿಕೆಟ್ ಕೊಡದಿದ್ದರೆ ಜೆಡಿಎಸ್‌ಗೆ ವಲಸೆ ಹೋಗುವ ಬಗ್ಗೆ ಕರಡಿ ಸಂಗಣ್ಣ ಚಿಂತನೆ
ಬೆಂಗಳೂರು(ಏ.15): ಬಿಜೆಪಿಯ ಇಬ್ಬರು ಸಂಸದರಿಗೆ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡುವ ಬಗ್ಗೆ ಕೊನೆಯ ಹಂತದ ಚರ್ಚೆ ನಡೆದಿದ್ದು, ಕುತೂಹಲ ಮೂಡಿಸಿದೆ. ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಮತ್ತು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ನಾಗಠಾಣ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ಕುರಿತು ಶುಕ್ರವಾರ ಬಾಕಿ ಉಳಿದಿರುವ ಕ್ಷೇತ್ರಗಳ ಅಭ್ಯಥಿರ್ಗಳ ಆಯ್ಕೆ ಕುರಿತಂತೆ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಇಬ್ಬರೂ ಸಂಸದರು ಈಗಾಗಲೇ ಟಿಕೆಟ್ ಕೇಳಿದ್ದಾರೆ. ಈ ಪೈಕಿ ಕರಡಿ ಸಂಗಣ್ಣ ಅವರು ಕೊಪ್ಪಳ ಕ್ಷೇತ್ರದ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಜೆಡಿಎಸ್‌ಗೆ ವಲಸೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಹೀಗಾಗಿ, ಅವರಿಗೇ ಟಿಕೆಟ್ ನೀಡಿದರೆ ಹೇಗೆ ಎಂಬ ವಿಷಯ ಪ್ರಸ್ತಾಪವಾಗಿದೆ.
ಪಕ್ಷದಲ್ಲಿ ಅಧಿಕಾರ ಅನುಭವಿಸಿ ಬೆನ್ನಿಗೆ ಚೂರಿ ಹಾಕಿದ ಸವದಿ ವಿಶ್ವಾಸಘಾತುಕ: ಎಂಪಿ ರೇಣುಕಾಚಾರ್ಯ
ಇನ್ನು ನಾಗಠಾಣ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಸಚಿವ ಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಈಗ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಮೇಲಾಗಿ ಗೋವಿಂದ ಕಾರಜೋಳ ಅವರಿಗೆ ಈಗಾಗಲೇ ಮಧೋಳ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ಹೀಗಾಗಿ ಅವರ ಪುತ್ರನಿಗೂ ಟಿಕೆಟ್ ನೀಡುವುದು ಸರಿಯಾಗಲಿಕಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಡುವೆ ಸಂಸದ ರಮೇಶ್ ಜಿಗಜಿಣಗಿ ಅವರೂ ನಾಗಠಾಣ ಕ್ಷೇತ್ರದ ಟಿಕೆಟ್ ಬಗ್ಗೆ ಒಲವು ಹೊಂದಿದ್ದಾರೆ. ಹೀಗಾಗಿ, ಅವರಿಗೆ ಟಿಕೆಟ್ ನೀಡಿದರೆ ಆ ಕ್ಷೇತ್ರದ ಗೆಲುವು ಸುಲಭವಾಗಲಿದೆ ಎಂಬ ಅಂಶವೂ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
